ಜಿಲ್ಲಾಸುದ್ದಿಗಳು

ಗ್ರಾಮ ಆಡಳಿತಾಧಿಕಾರಿ ವಿರುದ್ಧ ಅಕ್ರಮಗಳ ಆರೋಪ: ಅಮಾನತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

ಯಾದಗಿರಿ/ಕೆಂಭಾವಿ, ಜು. 29: ಸಿದ್ದನಗೌಡ ಕಾಮನಟಗಿ ಗ್ರಾಮದ ಗ್ರಾಮ ಆಡಳಿತಾಧಿಕಾರಿ (ವಿಎ) ಮಲ್ಲಾ ಬಿ. ಅವರು ಕರ್ತವ್ಯ ಲೋಪ ಹಾಗೂ ವಿವಿಧ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಸಮಗ್ರ ತನಿಖೆ ನಡೆಸಬೇಕೆಂದು ಕರ್ನಾಟಕ ರಾಜ್ಯ ಡಾ. ಬಿ.ಆರ್. ಅಂಬೇಡ್ಕರ್ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಯಾದಗಿರಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಸಮಿತಿಯ ಅಲ್ಪಸಂಖ್ಯಾತ ರಾಜ್ಯ ಪ್ರಧಾನ ಕಾರ್ಯದರ್ಶಿ ಬಂದೇನವಾಜ ನಾಸಿ, ಗ್ರಾಮ ಆಡಳಿತಾಧಿಕಾರಿ ಮಲ್ಲಾ ಬಿ. ಅವರು ಬಿಎಲ್‌ಒ ಅವರಿಗೆ ತಪ್ಪು ಮಾಹಿತಿ ನೀಡಿ, ಗ್ರಾಮದ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ 500ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಅದೇ ರೀತಿ, ಸಿದ್ದರಾಮಪ್ಪ ತಂದೆ ನಿಂಗಪ್ಪ ಎಂಬ ಒಂದೇ ವ್ಯಕ್ತಿಯ ಹೆಸರಿಗೆ 2020ರ ಜನವರಿ 29ರಂದು ಒಂದೇ ನೋಂದಣಿ ಸಂಖ್ಯೆಯಡಿ ಎರಡು ಮರಣ ಪ್ರಮಾಣಪತ್ರಗಳನ್ನು ಕಾನೂನುಬಾಹಿರವಾಗಿ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೋರ್ಟ್ ಆದೇಶವಿಲ್ಲದೆ ವಾರಸುದಾರರ ಹೆಸರುಗಳನ್ನು ನೋಂದಾಯಿಸುವುದು, ಬೆಳೆ ಪರಿಹಾರ ಕೊಡಿಸುವುದಾಗಿ ಹೇಳಿ ಮಧ್ಯವರ್ತಿಗಳ ಮೂಲಕ ಸಾರ್ವಜನಿಕರಿಂದ ಹಾಗೂ ಮೇಲಧಿಕಾರಿಗಳ ಹೆಸರನ್ನು ಬಳಸಿಕೊಂಡು ಹಣ ವಸೂಲಿ ಮಾಡಲಾಗಿದೆ ಎಂಬ ಆರೋಪಗಳೂ ಮನವಿಯಲ್ಲಿ ಸೇರಿವೆ.

ಸರ್ವೇ ಸಂಖ್ಯೆ 178/1ರಲ್ಲಿರುವ ಜಮೀನಿಗೆ ಸಂಬಂಧಿಸಿದಂತೆ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ ಸುಳ್ಳು ಮರಣ ಪ್ರಮಾಣಪತ್ರ ಸೃಷ್ಟಿಸಿ, ಕುಟುಂಬ ಸದಸ್ಯರ ನಡುವೆ ವಿವಾದ ಉಂಟುಮಾಡಿ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪವನ್ನೂ ಸಮಿತಿ ಮಾಡಿದೆ.

ಈ ಕುರಿತು ಈ ಹಿಂದೆಯೇ ತಾಲೂಕು ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಗ್ರಾಮ ಆಡಳಿತಾಧಿಕಾರಿ ಮಲ್ಲಾ ಬಿ. ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಮಾನತುಗೊಳಿಸಬೇಕು. ಇಲ್ಲವಾದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಬಂದೇನವಾಜ ನಾಸಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮಹಿಳಾ ಜಿಲ್ಲಾ ಅಧ್ಯಕ್ಷೆ ಶಂಶಾದ್ ಖಾನಂ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button