ಜಿಲ್ಲಾಸುದ್ದಿಗಳು

ಸಮಕಾಲೀನ ಸಾಮಾಜಿಕ ವಿಷಯಗಳತ್ತ ಕಲಾವಿದರು ಸ್ಪಂದಿಸಲಿ: ಡಾ. ಅಶೋಕ್ ಶಟಗಾರ್

ಕಲಬುರಗಿ: ನಗರದ ಸಾರ್ವಜನಿಕ ಉದ್ಯಾನವನದ ಬಯಲು ಗ್ರಂಥಾಲಯದಲ್ಲಿ ಸಮಾನ ಮನಸ್ಕರ ಗುಂಪು ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಶಿಬಿರದಲ್ಲಿ ವಿವಿಧ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿ ಗಮನ ಸೆಳೆದರು.

ಕಾರ್ಯಕ್ರಮವನ್ನು ಡಾ. ಅಶೋಕ್ ಶಟಗಾರ್ ಉದ್ಘಾಟಿಸಿದರು. ಮಾತನಾಡಿದ ಅವರು, ಕಲಾವಿದರು ಸಮಕಾಲೀನ ಸಾಮಾಜಿಕ ಸಮಸ್ಯೆಗಳು ಮತ್ತು ಜನಜೀವನಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚು ಸ್ಪಂದಿಸುವ ಕಲಾಕೃತಿಗಳನ್ನು ರಚಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಿವೃತ್ತ ಚಿತ್ರಕಲಾ ಶಿಕ್ಷಕ ಕಲ್ಯಾಣಪ್ಪ ಹಂಗರಗಿ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಭೀಮಸೇನ ಕುಲಕರ್ಣಿ ಮುಡಬೂಳ ಅವರು ಕಲಾವಿದರಿಗೆ ಶುಭ ಹಾರೈಸಿ, ಇಂತಹ ಶಿಬಿರಗಳು ಕಲಾವಿದರ ಪ್ರತಿಭೆ ಅನಾವರಣಗೊಳಿಸಲು ಹಾಗೂ ಪರಸ್ಪರ ಕಲಿಕಾ ವಾತಾವರಣ ನಿರ್ಮಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಶಿಬಿರದಲ್ಲಿ ಹತ್ತು ಮಂದಿ ಕಲಾವಿದರು ತಮ್ಮ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಗಿರೀಶ್ ಕುಲಕರ್ಣಿ, ಶಂಕರ ಗೌಡ ವಿಜಯ ಒರದ್ಕರ್, ಹಿರಿಯ ಕಲಾವಿದ ವಿ.ಬಿ. ಬಿರಾದಾರ ಹಾಗೂ ಪತ್ರಕರ್ತ ಗೋಪಿ ಕುಲಕರ್ಣಿ ಅವರು ಕಲಾವಿದರಿಗೆ ಪ್ರಮಾಣಪತ್ರ ವಿತರಿಸಿ ಗೌರವಿಸಿದರು.

ಸೂರ್ಯಕಾಂತ ನಂದೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಬಸಪ್ಪ ಬೊಮ್ಮನಹಳ್ಳಿ ಸ್ವಾಗತಿಸಿದರು. ಅಭಿಷೇಕ್ ಹಾಗೂ ಎಸ್.ಕೆ. ನಿರೂಪಣೆ ಮತ್ತು ವಂದನಾರ್ಪಣೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಕಲಾವಿದರು, ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button