ಕಲಬುರಗಿಯ 3 ಲಕ್ಷಕ್ಕೂ ಅಧಿಕ ರೈತರಿಗೆ ₹464 ಕೋಟಿ ಬೆಳೆ ವಿಮೆ ಪರಿಹಾರ
ಅಧಿಕಾರಿಗಳು, ಜನಪ್ರತಿನಿಧಿಗಳ ಕಾರ್ಯಕ್ಕೆ ಎಪಿಎಂಸಿ ಸದಸ್ಯ ನಾಗೇಶ ಮುಚಖೇಡ ಮೆಚ್ಚುಗೆ

ಕಲಬುರಗಿ: ಕಳೆದ ವರ್ಷದ ಭಾರಿ ಮಳೆ ಹಾಗೂ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ 3 ಲಕ್ಷಕ್ಕೂ ಅಧಿಕ ರೈತರಿಗೆ ಒಟ್ಟು ₹464 ಕೋಟಿ ಬೆಳೆ ವಿಮೆ ಪರಿಹಾರ ಹಣ ಜಮೆಯಾಗಿರುವುದು ಸಂತಸದ ಸಂಗತಿ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸದಸ್ಯ ನಾಗೇಶ ಡಿ. ಮುಚಖೇಡ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅತಿವೃಷ್ಟಿಯಿಂದ ಬೆಳೆ ಹಾನಿಯಾದ ತಕ್ಷಣ ಜಿಲ್ಲಾಡಳಿತ, ಕೃಷಿ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ತ್ವರಿತವಾಗಿ ಸ್ಪಂದಿಸಿ ಸಮಗ್ರ ಜಂಟಿ ಸರ್ವೇ ನಡೆಸಿದ್ದರು. ಬೆಳೆ ಹಾನಿಯ ನೈಜ ಪ್ರಮಾಣವನ್ನು ಗುರುತಿಸಿ ಸರ್ಕಾರಕ್ಕೆ ಸಮರ್ಪಕ ವರದಿ ಸಲ್ಲಿಸಿದ ಪರಿಣಾಮ ರೈತರಿಗೆ ಬೆಳೆ ವಿಮೆ ಪರಿಹಾರ ದೊರೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಜಿಲ್ಲಾಡಳಿತದ ನಿರಂತರ ಪ್ರಯತ್ನದ ಫಲವಾಗಿ ಕಲಬುರಗಿ ಜಿಲ್ಲೆಗೆ ಒಟ್ಟು ₹464 ಕೋಟಿ ಬೆಳೆ ವಿಮೆ ಪರಿಹಾರ ಮಂಜೂರಾಗಿದೆ. ಇದರಲ್ಲಿ ಮೊದಲ ಕಂತಿನ ₹243.53 ಕೋಟಿ ಈಗಾಗಲೇ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದು, ಎರಡನೇ ಕಂತಿನ ₹221 ಕೋಟಿ ಮೊತ್ತವೂ ಅರ್ಹ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆಯಾಗಿದೆ ಎಂದು ಅವರು ವಿವರಿಸಿದರು.
ಕಷ್ಟದ ಸಂದರ್ಭದಲ್ಲಿ ರೈತರ ಪರವಾಗಿ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಸೇವೆಯನ್ನು ನಾಗೇಶ ಡಿ. ಮುಚಖೇಡ ಶ್ಲಾಘಿಸಿದರು.
ಜಿಲ್ಲೆಯ ಸಮಸ್ತ ರೈತರ ಪರವಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿರುವ ಅವರು, ಮುಂದಿನ ದಿನಗಳಲ್ಲಿಯೂ ರೈತಪರ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಕೃಷಿಕರಿಗೆ ಹೆಚ್ಚಿನ ನೆರವು ದೊರೆಯುವಂತಾಗಲಿ ಎಂದು ಆಶಿಸಿದರು.



