ರಸ್ತೆ ಸುರಕ್ಷತಾ ನಿಯಮ ಪಾಲನೆಗೆ ಆದ್ಯತೆ ನೀಡಿ: ಚಾಲಕರಿಗೆ ಡಿವೈಎಸ್ಪಿ ಶಂಕರಗೌಡ ಪಾಟೀಲ ಕಿವಿಮಾತು

ಚಿತ್ತಾಪುರ, ಜು. 29: ರಸ್ತೆ ಅಪಘಾತಗಳನ್ನು ತಡೆಗಟ್ಟಲು ಎಲ್ಲ ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಎಂದು ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಮಾಡಬೂಳ ಪೊಲೀಸ್ ಠಾಣೆ ಆವರಣದಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಹಮ್ಮಿಕೊಂಡಿದ್ದ ಚಾಲಕರ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಜನದಟ್ಟಣೆ ಇರುವ ಪ್ರದೇಶಗಳು, ಶಾಲೆ–ಕಾಲೇಜುಗಳು ಹಾಗೂ ಗ್ರಾಮಗಳ ವ್ಯಾಪ್ತಿಯಲ್ಲಿ ವಾಹನಗಳನ್ನು ನಿಧಾನಗತಿಯಲ್ಲಿ ಚಲಾಯಿಸುವಂತೆ ಸೂಚಿಸಿದರು.
ಪ್ರತಿಯೊಬ್ಬ ವಾಹನ ಚಾಲಕರೂ ಕಡ್ಡಾಯವಾಗಿ ಚಾಲನಾ ಪರವಾನಗಿ, ವಾಹನ ನೋಂದಣಿ ಪ್ರಮಾಣಪತ್ರ ಹಾಗೂ ವಿಮೆ ಹೊಂದಿರಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಕಾನೂನುಬಾಹಿರವಾಗಿದ್ದು, ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುತ್ತಿರುವುದು ಕಂಡುಬಂದರೆ ಕಾನೂನು ಪ್ರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಸ್ತೆಯ ಮೇಲೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಬಾರದು. ನಿಗದಿತ ಸ್ಥಳದಲ್ಲಿಯೇ ವಾಹನಗಳನ್ನು ಕ್ರಮಬದ್ಧವಾಗಿ ಪಾರ್ಕಿಂಗ್ ಮಾಡಬೇಕು. ಒಂದು ವೇಳೆ ವಾಹನ ರಸ್ತೆ ಮಧ್ಯೆ ಕೆಟ್ಟು ನಿಂತರೆ ಕೂಡಲೇ ಜಿವಿಆರ್ ಟೋಲ್ ಅಧಿಕಾರಿಗಳಿಗೆ ಮಾಹಿತಿ ನೀಡಿ, ಪಾರ್ಕಿಂಗ್ ಲೈಟ್ಗಳನ್ನು ಆನ್ ಮಾಡಿ, ವಾಹನದ ಸುತ್ತ ಟ್ರಾಫಿಕ್ ಕೋನ್ಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ತಡೆಯಲು ಕ್ರಮವಹಿಸುವಂತೆ ಸಲಹೆ ನೀಡಿದರು.
ಯಾವುದೇ ರಸ್ತೆ ಅಪಘಾತ ಸಂಭವಿಸಿದರೆ ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಅಥವಾ ತುರ್ತು ಸಹಾಯವಾಣಿ 112ಕ್ಕೆ ಮಾಹಿತಿ ನೀಡಬೇಕು. ಗಾಯಾಳುಗಳನ್ನು 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ದೊರಕುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಪಿಎಸ್ಐಗಳಾದ ಗೌತಮ ಹಾಗೂ ಸಿದ್ದಲಿಂಗ (ತನಿಖೆ), ಠಾಣೆಯ ಸಿಬ್ಬಂದಿ, ಚಿತ್ತಾಪುರ, ಮಳಖೇಡ ಮತ್ತು ಸೇಡಂ ಲಾರಿ ಅಸೋಸಿಯೇಷನ್ಗಳ ಅಧ್ಯಕ್ಷರು, ಲಾರಿ, ಟಿಪ್ಪರ್ ಹಾಗೂ ಬಲ್ಕರ್ ವಾಹನಗಳ ಮಾಲೀಕರು ಮತ್ತು ಚಾಲಕರು, ರಾಜ್ಯ ಹೆದ್ದಾರಿ–10ರ ಜಿವಿಆರ್ ಅಧಿಕಾರಿಗಳು ಉಪಸ್ಥಿತರಿದ್ದರು.



