ಆರ್.ಎಸ್.ಎಸ್ ನಿಷೇಧಿಸಿ – ಪ್ರಜಾಪ್ರಭುತ್ವ ಉಳಿಸಿ : ದಲಿತ ಸಂಘರ್ಷ ಸಮಿತಿಯ ಆಗ್ರಹ

ಕಲಬುರಗಿ, :“ಆರ್.ಎಸ್.ಎಸ್ ನಿಷೇಧಿಸಿ – ಪ್ರಜಾಪ್ರಭುತ್ವ ಉಳಿಸಿ” ಎಂಬ ಘೋಷಣೆಗಳ ಮಧ್ಯೆ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿದರು.
ಆರ್.ಎಸ್.ಎಸ್ ಸಂಘಟನೆ ದೇಶದಲ್ಲಿ ಕೋಮುವಾದದ ವಿಷ ಬಿತ್ತುತ್ತಿದೆ ಎಂದು ಆರೋಪಿಸಿ, ಅದನ್ನು ನಿಷೇಧಿಸಬೇಕೆಂದು ಸಂಘರ್ಷ ಸಮಿತಿ ಆಗ್ರಹ ವ್ಯಕ್ತಪಡಿಸಿದೆ.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಭಾರಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಆಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರ ಪ್ರಕಾರ, ಆರ್.ಎಸ್.ಎಸ್ ಸಂಘಟನೆಯ ಸಿದ್ಧಾಂತಗಳು ಫ್ಯಾಸಿಸ್ಟ್ ಮತ್ತು ನಾಜಿ ಚಳುವಳಿಗಳ ಸ್ಫೂರ್ತಿಯನ್ನೇ ಪ್ರತಿಬಿಂಬಿಸುತ್ತವೆ, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಹೇಳಿದರು.
ಇದಲ್ಲದೆ, ಆರ್.ಎಸ್.ಎಸ್ ಸಂಸ್ಥೆಗೆ ಸಂವಿಧಾನ ಇಲ್ಲದ ಕಾರಣ ಅದರ ಚಟುವಟಿಕೆಗಳು ಪಾರದರ್ಶಕವಲ್ಲ ಎಂದು ಆರೋಪಿಸಿ, ಸರ್ಕಾರ ಮೌನ ವಹಿಸಿರುವುದನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ ಪ್ರೊ. ಆರ್.ಕೆ. ಹುಡುಗಿ, ಅರ್ಜುನ ಭದ್ರೆ, ಮಲ್ಲಿಕಾರ್ಜುನ ಕ್ರಾಂತಿ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾದಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಸಂಘರ್ಷ ಸಮಿತಿಯ ನಾಯಕರ ಪ್ರಕಾರ, ಪ್ರಜಾಪ್ರಭುತ್ವದ ಮೂಲ್ಯಗಳನ್ನು ಕಾಪಾಡಲು ಆರ್.ಎಸ್.ಎಸ್ ನಿಷೇಧ ಅತಿ ಅವಶ್ಯಕ ಎಂದು ಅವರು ಆಗ್ರಹ ವ್ಯಕ್ತಪಡಿಸಿದರು.