ಕಲಬುರಗಿಜಿಲ್ಲಾಸುದ್ದಿ

ಕೋಲಿ–ಕಬ್ಬಲಿಗ–ಕಬ್ಬೇರ ಜಾತಿಗಳಿಗೆ ಎಸ್‌ಟಿ ಸ್ಥಾನ: ಕೇಂದ್ರಕ್ಕೆ ಪ್ರಸ್ತಾವನೆ ಕಳಿಸಲು ಸರ್ಕಾರ ಸಿದ್ಧ – ಸಚಿವ ಪ್ರಿಯಾಂಕ್ ಖರ್ಗೆ ಭರವಸೆ

ಚಿತ್ತಾಪುರ:ಕೋಲಿ, ಕಬ್ಬಲಿಗ ಹಾಗೂ ಕಬ್ಬೇರ ಜಾತಿಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ಸರ್ಕಾರ ಸಿದ್ಧವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಭರವಸೆ ನೀಡಿದ್ದಾರೆ ಎಂದು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ಯಾಗಪೂರ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಅಧಿವೇಶನ ಸಂದರ್ಭದಲ್ಲಿ ತಾಲ್ಲೂಕು ಕೋಲಿ ಸಮಾಜದ ಮುಖಂಡರು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾಗಿ, ಕೋಲಿ, ಕಬ್ಬಲಿಗ ಜಾತಿಗಳನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಬೇಕೆಂದು ಮನವಿ ಸಲ್ಲಿಸಿದರು.

ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಈ ವಿಷಯವನ್ನು ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿದ್ದಾರೆ.ಕೇಂದ್ರದಿಂದ ಹಿಂದಿರುಗಿರುವ ಎಸ್‌ಟಿ ಕಡತವನ್ನು ಆಳವಾಗಿ ಅಧ್ಯಯನ ಮಾಡಿ, ಸಮರ್ಥ ದಾಖಲೆಗಳೊಂದಿಗೆ ಸರಿಯಾದ ರೀತಿಯಲ್ಲಿ ಮನವಿ ಸಲ್ಲಿಸುವಂತೆ ಸಚಿವರು ಸಮಾಜದ ಮುಖಂಡರಿಗೆ ಮಾರ್ಗದರ್ಶನ ನೀಡಿದ್ದಾರೆ. ಅಗತ್ಯ ದಾಖಲೆಗಳೊಂದಿಗೆ ಮನವಿ ಸಲ್ಲಿಸಿದರೆ, ಸರ್ಕಾರದಿಂದ ಶೀಘ್ರವಾಗಿ ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಬಲವಾದ ಪ್ರಸ್ತಾವನೆ ಕಳುಹಿಸಲಾ ಗುವುದು ಎಂದು ಭರವಸೆ ನೀಡಿದ್ದಾರೆ.

ವಿಳಂಬ ಮಾಡದೇ ಮನವಿ ಹಾಗೂ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದ ಸಚಿವರು, ಈ ಸಂಬಂಧ ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ.

ತಾಲ್ಲೂಕು ಕೋಲಿ ಮತ್ತು ಕಬ್ಬಲಿಗ ಸಮಾಜದ ಮುಖಂಡರ ನಿಯೋಗವು ಶೀಘ್ರದಲ್ಲೇ ಬೆಂಗಳೂರಿಗೆ ತೆರಳಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ನೇತೃತ್ವದಲ್ಲಿಯೇ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಿವಕುಮಾರ ಯಾಗಪೂರ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ 2020ರಲ್ಲಿ ಕೇಂದ್ರ ಸರ್ಕಾರವು ತಳವಾರ ಜಾತಿಯನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಅಧಿಸೂಚನೆ ಹೊರಡಿಸಿದ ಬಳಿಕ, ರಾಜ್ಯದಲ್ಲಿ ತಳವಾರ ಜನರಿಗೆ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡುವಲ್ಲಿ ಉಂಟಾದ ಗೊಂದಲವನ್ನು ಪರಿಹರಿಸುವಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಹಿಸಿದ ಮಹತ್ವದ ಪಾತ್ರವನ್ನು ಸಮಾಜದ ಮುಖಂಡರು ಸ್ಮರಿಸಿದರು.

ತಳವಾರ ಸಮಾಜದ ಸಮಸ್ಯೆಗಳನ್ನು ಮನಗಂಡು, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಂಬಂಧಿಸಿದ ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳ ಸಭೆ ನಡೆಸಿಸಿ, ರಾಜ್ಯ ಸರ್ಕಾರದಿಂದ ಹೊಸ ಆದೇಶ ಹೊರಡಿಸುವಂತೆ ಮಾಡಿದ ಸಚಿವರ ಪ್ರಯತ್ನವನ್ನು ಅವರು ಶ್ಲಾಘಿಸಿದರು.

ಈ ಬೆಳವಣಿಗೆಯ ಕುರಿತು ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಪೂರ, ಪ್ರಧಾನ ಕಾರ್ಯದರ್ಶಿ ಸಾಬಣ್ಣ ಭರಾಟೆ, ಮಾಜಿ ಯುವ ಕಾಂಗ್ರೆಸ್ ಕಲಬುರಗಿ ಜಿಲ್ಲಾಧ್ಯಕ್ಷ ಶಿವಕುಮಾರ ಹೊನಗುಂಟಿ ಹಾಗೂ ಕೋಲಿ ಸಮಾಜದ ಯುವ ತಾಲ್ಲೂಕು ಅಧ್ಯಕ್ಷ ಗುಂಡು ಐ. ನಾಪುರ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button