ಕೇಂದ್ರ ಬಜೆಟ್ ಕರ್ನಾಟಕಕ್ಕೆ ನಿರಾಶೆ; ರೈತರಿಗೆ ಶೂನ್ಯ ಕೊಡುಗೆ: ಪ್ರಶಾಂತಗೌಡ ಮಾಲಿಪಾಟೀಲ್ ಆಕ್ರೋಶ

ಕಲಬುರಗಿ: ಕೇಂದ್ರ ಸರ್ಕಾರ ಮಂಡಿಸಿರುವ 2026-27ನೇ ಸಾಲಿನ ಬಜೆಟ್ ಕರ್ನಾಟಕದ ಪಾಲಿಗೆ ಮತ್ತೊಮ್ಮೆ ನಿರಾಶಾದಾಯಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತಗೌಡ ಮಾಲಿಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಸಬ್ ಕಾ ಸಾತ್, ಸಬ್ ಕಾ ವಿಕಾಸ್” ಎಂಬ ಘೋಷಣೆ ಕೇವಲ ಮಾತಿಗೆ ಸೀಮಿತವಾಗಿದ್ದು, ಕೃಷಿ ಪ್ರಧಾನ ರಾಜ್ಯವಾದ ಕರ್ನಾಟಕದ ಪಾಲಿಗೆ ಈ ಬಜೆಟ್ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನೀರಾವರಿ ಯೋಜನೆಗಳ ಕುರಿತು ನಿರ್ಲಕ್ಷ್ಯ ತೋರಿದ್ದು, ಕರ್ನಾಟಕದ ರೈತರ ಜೀವನಾಡಿಯಾದ ಪ್ರಮುಖ ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದರು. ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ನಲ್ಲಿ ಘೋಷಿಸಿದ್ದ 5,300 ಕೋಟಿ ರೂಪಾಯಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಈ ಬಾರಿಯ ಬಜೆಟ್ನಲ್ಲಿ ಅದರ ಕುರಿತು ಯಾವುದೇ ಪ್ರಸ್ತಾಪವೂ ಇಲ್ಲ ಎಂದು ಅವರು ಹೇಳಿದ್ದಾರೆ.
ಮೇಕೆದಾಟು ಹಾಗೂ ಮಹಾದಾಯಿ ಯೋಜನೆಗಳಿಗೆ ಅಂತಿಮ ಅನುಮೋದನೆ ನೀಡದಿರುವುದು ಕರ್ನಾಟಕದ ಹಿತಾಸಕ್ತಿಗೆ ಧಕ್ಕೆಯಾಗಿದೆ. ಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ಏರಿಕೆ, ರಸಗೊಬ್ಬರ ಸಬ್ಸಿಡಿ ಕಡಿತದಿಂದ ರೈತರಿಗೆ ಹೆಚ್ಚುವರಿ ಭಾರವಾಗುತ್ತಿದೆ ಎಂದು ಅವರು ದೂರಿದ್ದಾರೆ.
ಹಣದುಬ್ಬರ ಏರಿಕೆಯಾಗುತ್ತಿದ್ದರೂ ಪಿಎಂ-ಕಿಸಾನ್ ಯೋಜನೆಯಡಿ ನೀಡುವ ವಾರ್ಷಿಕ 6,000 ರೂಪಾಯಿ ಸಹಾಯಧನವನ್ನು ಹೆಚ್ಚಿಸಿಲ್ಲ. ಜೊತೆಗೆ ರೈತರ ಸಾಲಮನ್ನಾ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ರೈತರಿಗೆ ಮಾಡಿದ ಅವಮಾನವಾಗಿದೆ ಎಂದು ಪ್ರಶಾಂತಗೌಡ ಮಾಲಿಪಾಟೀಲ್ ತಿಳಿಸಿದ್ದಾರೆ.



