ಡಾ. ಎಸ್.ಎಲ್. ಭೈರಪ್ಪ ಅವರ ಚಿಂತನೆಗೆ ಚಿತ್ತಾಪುರದಲ್ಲಿ ಕಸಾಪ ನುಡಿನಮನ

ಚಿತ್ತಾಪುರ:ಕನ್ನಡ ನಾಡಿನ ಖ್ಯಾತ ಸಾಹಿತಿ, ಪದ್ಮಭೂಷಣ ಪುರಸ್ಕೃತ ಡಾ. ಎಸ್.ಎಲ್. ಭೈರಪ್ಪ ಅವರ ಬರಹಗಳು ಸತ್ಯ ಮತ್ತು ಸೌಂದರ್ಯದ ವರವಾಗಿದ್ದು, ಅವರ ಬದುಕು ಮತ್ತು ಬರಹ ಎರಡೂ ಒಂದೇ ಆಗಿವೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ನಾಲವಾರ ಹೇಳಿದರು.
ಡಾ. ಭೈರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಪಟ್ಟಣದ ಶರಣಬಸವೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿನಮನ ಸಮಾರಂಭದಲ್ಲಿ ಅವರು ಮಾತನಾಡಿದರು. “ಭೈರಪ್ಪ ಅವರ ಕೃತಿಗಳಲ್ಲಿ ಜೀವಂತಿಕೆ ಇದೆ. ತಮ್ಮ ಪುಸ್ತಕ ಮಾರಾಟದ ಹಣವನ್ನು ಸಮಾಜಮುಖಿ ಚಟುವಟಿಕೆಗಳಿಗೆ ಬಳಸಿದ್ದವರು. ಇದು ಅವರ ಉದಾತ್ತ ಗುಣದ ಸಾಕ್ಷಿಯಾಗಿದೆ” ಎಂದು ಶ್ಲಾಘಿಸಿದರು.
“ಅವರು ನೈಜ ಬರಹಗಾರರು. ಅವರ ಕಾದಂಬರಿಗಳು ಹಲವು ಭಾಷೆಗಳಿಗೆ ಅನುವಾದಗೊಂಡಿವೆ, ಚಲನಚಿತ್ರಗಳಾಗಿವೆ. ನಮ್ಮ ಬದುಕಿಗೆ ದಾರಿದೀಪವಾಗುವಂತಹವು. ಅವರ ಸಾಹಿತ್ಯವನ್ನು ಓದುವ ಮೂಲಕ ಬದುಕನ್ನು ಸುಂದರಗೊಳಿಸಬಹುದು” ಎಂದು ಅವರು ಅಭಿಪ್ರಾಯಪಟ್ಟರು.
ಸಾಹಿತಿ ಲಿಂಗಪ್ಪ ಮಲ್ಕನ್ ಮಾತನಾಡಿ, “ಡಾ. ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಗಬೇಕಾಗಿತ್ತು. ಮರಣೋತ್ತರವಾದರೂ ಆ ಗೌರವ ದೊರೆಯಲಿ” ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಳಿ, ತಾಲೂಕು ಕಸಾಪ ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ, ಮಾಜಿ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ ಸೇರಿದಂತೆ ಹಲವರು ಭೈರಪ್ಪ ಅವರ ಸಾಹಿತ್ಯ ಕೀರ್ತಿಯನ್ನು ಸ್ಮರಿಸಿದರು.ಭೈರಪ್ಪ ಅವರಿಗೆ ಗೌರವ ಸೂಚಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಕಾಶೀನಾಥ ಗುತ್ತೇದಾರ್, ವೀರಭರಪ್ಪ ಪಾಟೀಲ ಹುಮನಾಬಾದ, ಶ್ರೀನಿವಾಸ್ ಪೆಂದು, ಕೋಟೇಶ್ವರ ರೇಷ್ಮಿ, ಅನಿಲ ವಡ್ಡಡಗಿ, ಬಸವರಾಜ್ ಯಂಬತ್ನಾಳ, ಅಂಬರೀಷ್ ಸುಲೇಗಾಂವ್, ನಾಗೇಂದ್ರಪ್ಪ ಹೊಟ್ಟಿ, ಸಿದ್ದು ಕುಂಬಾರ ಮತ್ತಿತರರು ಹಾಜರಿದ್ದರು.ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು. ಕಾಶಿರಾಯ ಕಲಾಲ ವಂದಿಸಿದರು.