ಮುತ್ತಗಾ ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಮೂರ್ತಿ ಭಗ್ನ:ರಸ್ತೆ ತಡೆ ಪ್ರತಿಭಟನೆ

ಪರತಾಬಾದ: ಶಹಾಬಾದ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಇದೇ ವರ್ಷ ಸ್ಥಾಪನೆಗೊಂಡು ಉದ್ಘಾಟನೆಯಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ದುಷ್ಕರ್ಮಿಗಳು ರಾತ್ರಿ ಭಗ್ನಗೊಳಿಸಿರುವ ಘಟನೆಗೆ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಈ ಘಟನೆಯನ್ನು ಖಂಡಿಸಿ ಪರತಾಬಾದ ಹೆದ್ದಾರಿಯಲ್ಲಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಆಂದೋಲನ ನಡೆಸಲಾಯಿತು. ಪ್ರತಿಭಟನಾಕಾರರು ಒಂದು ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಅಪರಾಧಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿದರು.
ಈ ಆಕ್ರೋಶ ಭರಿತ ಪ್ರತಿಭಟನೆಯಲ್ಲಿ ಕೊಲಿ ಸಮಾಜದ ಅಧ್ಯಕ್ಷ ಸಿದ್ದು ಎಸ್. ತಳವಾರ, ಶರಣು ಎಮ್. ಮಂದ್ರವಾಡ, ದೇವು ತೆಗನೂರ, ಸೂರ್ಯಕಾಂತ ತಿಳಗೂಳ, ಶರಣು ಸಿದ್ದರಾಮ, ವಿಜಯಕುಮಾರ ತಳವಾರ, ಡಾ. ಶಿವಕುಮಾರ ಶರ್ಮಾ, ಮಲ್ಲಿಕಾರ್ಜುನ ಎಸ್. ಅವಂಟಿಗಿ, ಸಂಜು ಸರಡಗಿ, ಕುಶಾಲ ಬಸವಪಟ್ಟಣ ಸೇರಿದಂತೆ ಅನೇಕರು ಭಾಗವಹಿಸಿದರು.
ಪ್ರತಿಭಟನಾಕಾರರು, “ಮೂರ್ತಿ ಭಗ್ನಗೊಳಿಸಿದ ದುಷ್ಕೃತ್ಯವು ಸಮಾಜವನ್ನು ಪ್ರಚೋದಿಸುವ ಗಂಭೀರ ಪ್ರಯತ್ನ. ಅಪರಾಧಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು” ಎಂದು ಒತ್ತಾಯಿಸಿದರು.