ಕಲಬುರಗಿಜಿಲ್ಲಾಸುದ್ದಿ

ಕೆಆರ್‌ಐಡಿಎಲ್‌, ಹ್ಯಾಬಿಟೆಟ್ ಕಾಮಗಾರಿಗಳಲ್ಲಿ ಭ್ರಷ್ಟಾಚಾರ: ಶಿವಕುಮಾರ ನಾಟಿಕಾರ ಆರೋಪ

₹132 ಕೋಟಿಯ ಕಾಮಗಾರಿಗಳಲ್ಲಿ ಗಂಭೀರ ಅಕ್ರಮ – ಶೀಘ್ರ ಕಾನೂನು ಹೋರಾಟಕ್ಕೆ ಎಚ್ಚರಿಕೆ

“ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಇಲಾಖೆಯ ಅಧೀನದಲ್ಲೇ ಕೆಆರ್‌ಐಡಿಎಲ್ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಅವ್ಯವಹಾರ ಕುರಿತು ಈಗಾಗಲೇ ಪತ್ರ ಬರೆದಿದ್ದರೂ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತೆ ಪತ್ರ ಬರೆದು ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಕ್ರಮ ಕೈಗೊಳ್ಳದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಬೃಹತ್ ಹೋರಾಟ ಕೈಗೊಳ್ಳಲಾಗುವುದು” ಎಂದು ಶಿವಕುಮಾರ ನಾಟಿಕಾರ ಎಚ್ಚರಿಸಿದರು.

ಅಫಜಲಪುರ: ‘ತಾಲ್ಲೂಕಿನ 2023-24 ಮತ್ತು 202-25 ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಯಿಂದ 217 ಕಾಮಗಾರಿಗಳಿಗೆ ಸುಮಾರು ₹132 ಕೋಟಿ ಅನುದಾನ ಸರ್ಕಾರದ ಏಜೆನ್ಸಿಗಳಾದ ಕೆಆರ್‌ಐಡಿಎಲ್ ಮತ್ತು ಹ್ಯಾಬಿಟೆಟ್‌ಗೆ ನೀಡಲಾಗಿದೆ. ಈ ಎಲ್ಲ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ವಿವರವಾದ ಮಾಹಿತಿ ಪಡೆದು ಕಾನೂನು ಹೋರಾಟ ಮಾಡುತ್ತೇವೆ’ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ತಿಳಿಸಿದರು.


ಮಂಗಳವಾರ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ‘ಕೆಕೆಆರ್‌ಡಿಬಿ ಯಿಂದ 2023 -24 ನೆ ಸಾಲಿನಲ್ಲಿ 128 ಕಾಮಗಾರಿಗಳಿಗೆ ₹38 ಕೋಟಿ, ಅದರಂತೆ ಹ್ಯಾಬಿಟೆಟ್ ಏಜೆನ್ಸಿಗೆ ನೀಡಿದ 11 ಕಾಮಗಾರಿಗಳಿಗೆ ₹13 ಕೋಟಿ ಖರ್ಚು ಮಾಡಿದ್ದಾರೆ. 2024 – 25 ನೇ ಸಾಲಿನಲ್ಲಿ ಕೆಆರ್‌ಐಡಿಎಲ್‌ಗೆ 70 ಕಾಮಗಾರಿಗಳಿಗೆ ₹70 ಕೋಟಿ ಖರ್ಚು ಮಾಡಿದ್ದಾರೆ’ ಎಂದು ತಿಳಿಸಿದರು.


‘ಅನೇಕ ಕಾಮಗಾರಿಗಳು ಕ್ರೀಯಾ ಯೊಜನೆ ಪ್ರಕಾರ ನಡೆದಿಲ್ಲ. ಅಧಿಕಾರಿಗಳು ಜಿಎಸ್‌ಟಿ ಕಟ್ಟುವಲ್ಲಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಕೆಆರ್‌ಐಡಿಎಲ್ ಅಧಿಕಾರಿಗಳು, ಗ್ರೂಪ್ ಲೀಡರ್‌ಗಳು (ವೆಂಡರ್) ಮುಖಾಂತರ ಕಾಮಗಾರಿಗಳಿಗೆ ಬೇಕಾಗುವ ಕೂಲಿ ಕಾರ್ಮಿಕರು ಮತ್ತು ಸಾಮಗ್ರಿ ಖರೀದಿಗಾಗಿ ಬಿಲ್ ಪಾವತಿ ಮಾಡುತ್ತಾರೆ. ವೆಂಡರಗಳಿಗೆ ಕಾನೂನಿನ ಚೌಕಟ್ಟು ಮೀರಿ ಹಣ ವರ್ಗಾವಣೆ ಮಾಡುತ್ತಾರೆ. ಸರ್ಕಾರದ ಏಜೆನ್ಸಿಗಳಿಗೆ ಕಾಮಗಾರಿಗಳು ನೀಡುವುದರಿಂದ ಗುತ್ತಿಗೆದಾರರು ಕಂಗಾಲಾಗಿದ್ದಾರೆ’ ಎಂದು ಆರೋಪಿಸಿದರು.


ಅನೈತಿಕ ಕಮಿಷನ್ ವಸೂಲಿ: ‘ಕಾಮಗಾರಿಗಳ ಅನುಮೋದನೆ, ಬಿಲ್ ಪಾವತಿಗಳು ಹಾಗೂ ಟೆಂಡರ್ ಪ್ರಕ್ರಿಯೆಯ ವೇಳೆ ಸುಮಾರು ಶೇ.15 ರಿಂದ 20 ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ’ ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ರಾಜು ಉಕ್ಕಲಿ, ಶ್ರೀಶೈಲ್ ಗೌಡ ಪಾಟೀಲ, ಮರೆಪ್ಪ ಜಮಾದಾ‌ರ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button