ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಎಂ.ಎಸ್. ಪಾಟೀಲ ನರಿಬೋಳ

ಕಲಬುರಗಿ,:“ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅತಿ ಅಗತ್ಯ” ಎಂದು ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಎಂ.ಎಸ್. ಪಾಟೀಲ ನರಿಬೋಳ ಹೇಳಿದರು.
“ರಾಜಕೀಯ ನಾಯಕರು ಭಾಗದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ ನೀಡಲಾದ 371(ಜೆ) ವಿಶೇಷ ಸ್ಥಾನಮಾನವನ್ನು ಕೇವಲ ಕಾಗದದ ಮೇಲಿನ ಅಲಂಕಾರವನ್ನಾಗಿ ಮಾಡಿಕೊಂಡಿದ್ದಾರೆ. ಅದರ ಅಸಲಿಯ ಅರ್ಥ ಸರ್ಕಾರಕ್ಕೆ ಗೊತ್ತಿಲ್ಲ” ಎಂದು ಆರೋಪಿಸಿದರು.
“ನಮ್ಮ ಭಾಗಕ್ಕೆ ಮಂಜೂರಾದ ಅನೇಕ ಉನ್ನತ ಸಂಸ್ಥೆಗಳು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ರಾಯಚೂರಿಗೆ ನೀಡಲಾದ ಐಐಟಿ ನಮಗೆ ಬಂದಿರಬೇಕಾಗಿತ್ತು, ಆದರೆ ಅದು ಬೇರೆ ಜಿಲ್ಲೆಗೆ ಹೋಗಿದೆ. 371(ಜೆ) ಸರಿಯಾಗಿ ಜಾರಿಗೆ ಬರದ ಕಾರಣ ಮುಂಬಡ್ತಿ, ಉದ್ಯೋಗ, ಶಿಕ್ಷಣ ಎಲ್ಲ ಕ್ಷೇತ್ರಗಳಲ್ಲಿ ಅನ್ಯಾಯವಾಗಿದೆ” ಎಂದು ಹೇಳಿದರು.
ಪಾಟೀಲ ನರಿಬೋಳ ಅವರು, “ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನೀಡುವ ಅನುದಾನ ಸಹ ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗುತ್ತಿದೆ. ಹಲವು ಬಾರಿ ಸಂಸದರು, ಸಚಿವರು, ಶಾಸಕರು ಮತ್ತು ಮಾಜಿ ಮುಖಂಡರ ಗಮನಕ್ಕೆ ತಂದರೂ ಫಲ ಸಿಕ್ಕಿಲ್ಲ. ಇವರಿಂದ ಭಾಗದ ಅಭಿವೃದ್ಧಿ ಸಾಧ್ಯವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ನಾವು ಕರ್ನಾಟಕವನ್ನು ವಿಭಜಿಸುವ ಉದ್ದೇಶವಿಲ್ಲ, ಅಖಂಡ ಕರ್ನಾಟಕವನ್ನೇ ಬಯಸುತ್ತೇವೆ. ಆದರೆ ನಮ್ಮ ಭಾಗದ ಹಕ್ಕು, ಅಭಿವೃದ್ಧಿ ಹಾಗೂ ಗೌರವಕ್ಕಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕೇಬೇಕು” ಎಂದು ಅವರು ಘೋಷಿಸಿದರು.
ಸಭೆಯಲ್ಲಿ ಮಹಾ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಜನವರಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ಜಿಲ್ಲಾ ಉಪಾಧ್ಯಕ್ಷ ವಿಶ್ವರಾಧ್ಯ ಬಡಿಗೇರ, ಮಲ್ಲಿಕಾರ್ಜುನ ಡೋಲೆ, ಶರಣಗೌಡ ಪಾಟೀಲ ಹಾಲಗಡ್ಲಾ, ತಾತಾಗೌಡ ಪಾಟೀಲ ಮಾಲಾಕಣ್ಣಿ, ಮಹಾದೇವಿ ಹೇಳವರ್, ಬಾಪುರೆಡ್ಡಿ ಹಾಗೂ ನೂರಾರು ಹೋರಾಟಗಾರರು ಭಾಗವಹಿಸಿದ್ದರು.
ಪಾಟೀಲ ನರಿಬೋಳ ಅವರು, “ಅನ್ಯಾಯದ ವಿರುದ್ಧ ಹೋರಾಟ ಮಾಡಿದಾಗ ಸರ್ಕಾರ ಪೋಲಿಸರ ಮೂಲಕ ಹೋರಾಟಗಾರರ ಧ್ವನಿ ಕುಂಠಿತಗೊಳಿಸುತ್ತಿದೆ. ಇದನ್ನು ಖಂಡಿಸುತ್ತೇವೆ. ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ. ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜನಮನದ ಆಶಯವಾಗಿದೆ” ಎಂದು ಘೋಷಿಸಿದರು.



