ಆರೋಗ್ಯ ಸಮಸ್ಯೆಯಿಂದ ರೈತರನ್ನು ಭೇಟಿಯಾಗದಿದ್ದಕ್ಕೆ ಕ್ಷಮೆ ಕೇಳಿದ ಶಾಸಕ ಎಂ.ವೈ. ಪಾಟೀಲ

ಅಫಜಲಪುರ,: ಕಲಬುರಗಿ ಜಿಲ್ಲೆ ಹಾಗೂ ಅಫಜಲಪುರ ಪ್ರದೇಶದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಿರಂತರ ಸುರಿದ ಧಾರಾಕಾರ ಮಳೆಯಿಂದ ಬೆಳೆಗಳು ಹಾನಿಗೊಳಗಾಗಿವೆ. ಮಳೆಯಿಂದಾಗಿ ರೈತರು ಮೂರು ಬಾರಿ ಬಿತ್ತನೆ ಮಾಡಿದರೂ ಕೂಡ ಬೆಳೆ ನಾಶವಾಗಿರುವ ದುಸ್ಥಿತಿ ಉಂಟಾಗಿದೆ ಎಂದು ಶಾಸಕ ಎಂ.ವೈ. ಪಾಟೀಲ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಹಸಿರು ಬರಗಾಲದಂತಿರುವ ಈ ಪರಿಸ್ಥಿತಿಯಲ್ಲಿ ರೈತರ ಹೊಲಗಳಲ್ಲಿ ನೀರು ನಿಂತಿದ್ದು ಉಳುಮೆ ಮಾಡಲು ಸಾಧ್ಯವಾಗುತ್ತಿಲ್ಲ. ಅನೇಕ ಮನೆಗಳು ಜಲಾವೃತಗೊಂಡಿದ್ದು, ರಸ್ತೆ, ಸೇತುವೆಗಳು ಹಾನಿಗೊಳಗಾಗಿವೆ. ಭೀಮಾ ನದಿಯ ಸೇತುವೆಯೂ ಮಳೆಗೆ ಕೊಚ್ಚಿಹೋಗಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ” ಎಂದು ಹೇಳಿದ್ದಾರೆ.
ಶಾಸಕರಾದ ಪಾಟೀಲ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ರೈತರನ್ನು ನೇರವಾಗಿ ಭೇಟಿಯಾಗಲು ಆಗದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. “ನಾನು ದೂರವಾಣಿ ಮೂಲಕವೇ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರಿಗೆ ಪರಿಸ್ಥಿತಿಯ ವಿವರವನ್ನು ನೀಡಿದ್ದೇನೆ. ಸರ್ಕಾರ ರೈತರ ನೆರವಿಗೆ ಬರಬೇಕೆಂದು ವಿನಂತಿಸಿದ್ದೇನೆ” ಎಂದು ತಿಳಿಸಿದ್ದಾರೆ.
ಮಳೆ ನಿಂತ ಬಳಿಕ ರೈತರು ಮತ್ತೆ ಬಿತ್ತನೆ ಮಾಡಲು ಇಚ್ಛಿಸುತ್ತಿರುವುದರಿಂದ ಉಚಿತವಾಗಿ ಬೀಜ, ರಸಗೊಬ್ಬರ, ಔಷಧಿಗಳನ್ನು ಒದಗಿಸುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜೊತೆಗೆ ಕೊಚ್ಚಿಹೋದ ಸೇತುವೆಗಳು, ಹಾಳಾದ ರಸ್ತೆಗಳ ತುರ್ತು ದುರಸ್ತಿ ಅಗತ್ಯವಿದೆ ಎಂದಿದ್ದಾರೆ.
“ಮುಖ್ಯಮಂತ್ರಿಗಳು ರೈತರಿಗೆ ಭರವಸೆ ನೀಡಿದ್ದಾರೆ. ಯಾರು ಭಯಪಡಬಾರದು, ಸರ್ಕಾರ ನಿಮ್ಮ ಜೊತೆಗಿದೆ. ರೈತರು ಧೈರ್ಯದಿಂದ ಸಮಸ್ಯೆಯನ್ನು ಎದುರಿಸಬೇಕು” ಎಂದು ಶಾಸಕರು ಸಂದೇಶ ನೀಡಿದ್ದಾರೆ.