ನನ್ನ ಮತ ಮಾರಾಟಕ್ಕಿಲ್ಲ ಮತದಾರ ಜಾಗೃತಿ ಆಂದೋಲನಕ್ಕೆ ಭೀಮಾಶಂಕರ ಚಾಲನೆ

ಕಲಬುರಗಿ:ಭಾರತ ವಿಶ್ವಗುರುವಾಗಲು ಯುವ ಶಕ್ತಿಯ ಕೊಡುಗೆ ಅಪಾರವಾಗಿದ್ದು, ವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಫಿರೋಜಾಬಾದ್ ಹೇಳಿದರು.
ನಗರದ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಜ್ಞಾನ ಸಿಂಚನ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿಯ ವತಿಯಿಂದ ಆಯೋಜಿಸಿದ್ದ ‘ನನ್ನ ಮತ ಮಾರಾಟಕ್ಕಿಲ್ಲ – ಮತದಾರ ಜಾಗೃತಿ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಜನಾಂಗವೇ ದೇಶದ ಭವಿಷ್ಯದ ಆಧಾರ ಸ್ತಂಭವಾಗಿದ್ದು, ಇಂದಿನ ಕಲುಷಿತ ರಾಜಕಾರಣದಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಪ್ರತಿಯೊಬ್ಬ ನಾಗರಿಕನು ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸಿದಾಗ ಮಾತ್ರ ಮತದಾನದ ಪಾವಿತ್ರ್ಯವನ್ನು ಕಾಪಾಡಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕ ರಮೇಶ್ ಆರ್. ಧುತ್ತರಗಿ ಮಾತನಾಡಿ, ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲವನ್ನು ನಿಯಂತ್ರಿಸುವ ಅಗತ್ಯವಿದೆ. ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಯಬೇಕಾದರೆ ಜನರಲ್ಲಿ ಮತದಾನ ಜಾಗೃತಿ ಮೂಡಿಸಬೇಕು. ಚುನಾವಣಾ ಸಂದರ್ಭ ಹಣ ನೀಡಲು ಬಂದವರನ್ನು ಸಾರ್ವಜನಿಕವಾಗಿ ಬಹಿಷ್ಕರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ನಾಗರಾಜ ಹಡಪದ ಮಾತನಾಡಿ, ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು. ಸ್ಪರ್ಧಿಸುವ ಅಭ್ಯರ್ಥಿಗಳು ಸೂಕ್ತರಲ್ಲವೆನಿಸಿದಲ್ಲಿ ನೋಟಾ ಆಯ್ಕೆಯನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವಶರಣಪ್ಪ ಪೂಜಾರಿ ಉಪಸ್ಥಿತರಿದ್ದರು. ಭಾಗ್ಯಶ್ರೀ ಪ್ರಾರ್ಥನೆ ಸಲ್ಲಿಸಿದರು. ಉಪನ್ಯಾಸಕಿ ಪವಿತ್ರಾ ಹಿರೇಮಠ ಸ್ವಾಗತಿಸಿದರು. ಅಂಕಿತಾ ಜೋಶಿ ನಿರೂಪಿಸಿದರು. ಸುರೇಖಾ ಕುಲಕರ್ಣಿ ಮತದಾರ ಪ್ರತಿಜ್ಞಾವಿಧಿ ಬೋಧಿಸಿದರು. ಕೊನೆಯಲ್ಲಿ ಪ್ರಿಯಾಂಕಾ ಭಾಗೋಡಿ ವಂದಿಸಿದರು.



