ಇಂದು ರಕ್ಷಿಸಿ – ನಾಳೆ ಸುರಕ್ಷಿತ ಕಾನೂನು ಸಕ್ಷರತಾ ಕಾರ್ಯಕ್ರಮಕ್ಕೆ ಇಜೇರಿಯಲ್ಲಿ ಚಾಲನೆ

ಜೇವರ್ಗಿ: ತಾಲೂಕು ಕಾನೂನು ಸೇವೆಗಳ ಸಮಿತಿ ಜೇವರ್ಗಿ, ವಕೀಲರ ಸಂಘ ಜೇವರ್ಗಿ, ಕಂದಾಯ ಇಲಾಖೆ, ತಾಲೂಕು ಪಂಚಾಯತಿ ಯಡ್ರಾಮಿ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ “ಇಂದು ರಕ್ಷಿಸಿ – ನಾಳೆ ಸುರಕ್ಷಿತ” ದಿನಾಚರಣೆ ಅಂಗವಾಗಿ ಕಾನೂನು ಸಕ್ಷರತಾ ಕಾರ್ಯಕ್ರಮವನ್ನು ಗುರುವಾರ ಡಾ. ಬಿ.ಆರ್. ಅಂಬೇಡ್ಕರ್ ಭವನ, ಇಜೇರಿಯಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದ್ ಗೌರವಾನ್ವಿತ ಶ್ರೀ ಕಾಶಿನಾಥ ವಿ. ಉಪ್ಪಾರ್, ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವೆಗಳ ಸಮಿತಿ, ಜೇವರ್ಗಿ ಅವರು ಮಾತನಾಡಿ, ಕಾನೂನು ಜ್ಞಾನವು ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾಗಿದ್ದು, ಕಾನೂನು ಅರಿವು ಇದ್ದಾಗ ಮಾತ್ರ ಸಮಾಜ ಸುರಕ್ಷಿತವಾಗಿರಲು ಸಾಧ್ಯ ಎಂದು ತಿಳಿಸಿದರು. “ಇಂದು ರಕ್ಷಿಸಿ – ನಾಳೆ ಸುರಕ್ಷಿತ” ಎಂಬ ಸಂದೇಶವು ಕೇವಲ ಘೋಷವಾಕ್ಯವಲ್ಲ, ಅದು ಜವಾಬ್ದಾರಿಯುತ ನಾಗರಿಕತ್ವದ ಸಂಕೇತವಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಸ್.ಎ. ಪಾಟೀಲ್ ಮಾತನಾಡಿ, ತಾಲೂಕು ಕಾನೂನು ಸೇವೆಗಳ ಸಮಿತಿಯ ಮೂಲಕ ಲಭ್ಯವಿರುವ ಉಚಿತ ನ್ಯಾಯ ಸಹಾಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಕೀಲರ ಸಂಘದ ಕಾರ್ಯದರ್ಶಿಗಳಾದ ಶ್ರೀ ರಾಜಶೇಖರ್ ಶಿಲ್ಪಿ ಮಾತನಾಡಿ, ಕಾನೂನು ಸೇವೆಗಳು ಎಲ್ಲರಿಗೂ ಉಚಿತವಾಗಿ ಮತ್ತು ಸಮಾನವಾಗಿ ಲಭ್ಯವಿದ್ದು, ಪ್ರತಿಯೊಬ್ಬರೂ ಅದನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕರಾಗಿ ವಕೀಲರಾದ ಶ್ರೀ ರಾಜು ಮುದ್ದಡಗಿ ಅವರು ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾನೂನುಗಳು, ಸಾರ್ವಜನಿಕ ಸುರಕ್ಷತೆ ಹಾಗೂ ಕಾನೂನು ಸೇವೆಗಳ ಮಹತ್ವ ಕುರಿತು ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಪೊಲೀಸ್ ಇಲಾಖೆ, ಪಂಚಾಯತ್ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



