ಸಿಸಿ ರಸ್ತೆ, ನಾಲೆ ಮತ್ತು ನೀರಿನ ವ್ಯವಸ್ಥೆ ಒದಗಿಸಬೇಕೆಂದು ಮನವಿ

ಕಲಬುರಗಿ :ನಗರದ ವಾರ್ಡ್ ನಂ. 31 ರ ಓಂ ನಗರ ಬಡಾವಣೆಯ ನಿವಾಸಿಗಳು ವರ್ಷಗಳಿಂದ ಬೇಡಿಕೆ ಇಟ್ಟಿದ್ದ ಮೂಲಭೂತ ಸೌಲಭ್ಯಗಳ ಒದಗಿಕೆಗೆ ಸಂಬಂಧಿಸಿದಂತೆ ಉತ್ತರ ಕ್ಷೇತ್ರದ ಶಾಸಕಿ ಖನಿಜಾ ಫಾತಿಮಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಬಡಾವಣೆಯ ಮುಖಂಡರು ಕಾಂಗ್ರೆಸ್ ಮುಖಂಡ ಫರಾಜುಲ್ ಇಸ್ಲಾಂ ಅವರ ನೇತೃತ್ವದಲ್ಲಿ ಶಾಸಕರನ್ನು ಭೇಟಿಯಾಗಿ — ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ವಿನಂತಿಸಿದರು.
ನಿವಾಸಿಗಳು 30-40 ವರ್ಷಗಳಿಂದ ರಸ್ತೆ ಕಾಮಗಾರಿ ಕೈಗೊಳ್ಳದಿರುವುದರಿಂದ ಜನರಿಗೆ ಭಾರಿ ತೊಂದರೆ ಎದುರಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಗುರುಕುಲ ಶಾಲೆಯಿಂದ ವಿರೇಂದ್ರ ಪಾಟೀಲ್ ಮನೆವರೆಗೆ ಹಾಗೂ ಶಿವಯೋಗೆಪ್ಪ ಮನೆಯಿಂದ ಸರ್ಕಾರಿ ಶಾಲೆಯವರೆಗೆ ಸಿಸಿ ರಸ್ತೆ ನಿರ್ಮಾಣದ ಜೊತೆಗೆ ಎರಡೂ ಬದಿಗಳಲ್ಲಿ ನಾಲೆ ಕಾಮಗಾರಿ ಮಾಡುವಂತೆ ಮನವಿ ಸಲ್ಲಿಸಲಾಯಿತು.
ಇದೇ ರೀತಿ ಬಡಾವಣೆಗೆ ಶಾಶ್ವತ 24/7 ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಹಲವು ಬಾರಿ ಮಹಾನಗರ ಪಾಲಿಕೆಯ ಸದಸ್ಯರಿಗೆ ಮನವಿ ಮಾಡಿದರೂ ಫಲಕಾರಿಯಾಗಿಲ್ಲವೆಂದು ನಿವಾಸಿಗಳು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ವೀರಕುಮಾರ ಮಾಲಿಪಾಟೀಲ್, ಶಿವಯೋಗಪ್ಪಾ, ನಾಗೇಂದ್ರಪ್ಪಾ, ಮಲ್ಲಿಕಾರ್ಜುನ, ಜಯಪ್ರಕಾಶ ಅಂಬಾಜಿ, ವಿಠಲ ಪೂಜಾರಿ, ಸುನೀಲಕುಮಾರ, ಶಿವರಾಜ, ಪ್ರಭಾಕರ, ಸಿದ್ರಾಮಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.