ಗುಲಬರ್ಗಾ ವಿವಿ ಸಂಗೀತ ವಿಭಾಗದಲ್ಲಿಅಂಕ ವಿತರಣೆ–ನೇಮಕಾತಿಯಲ್ಲಿ ಜಾತಿ ತಾರತಮ್ಯ ಆರೋಪ

ಕಲಬುರಗಿ:ಗುಲಬರ್ಗಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದ ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಪರೀಕ್ಷಾ ಫಲಿತಾಂಶ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಅನ್ಯಾಯ ಹಾಗೂ ಜಾತಿ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ, ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ ಅವರ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಕುಲಸಚಿವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಬಸವರಾಜ ಬಿ. ಬಾಗೇವಾಡಿ ಅವರು, “ವಿಶ್ವವಿದ್ಯಾಲಯವು ಜ್ಞಾನಮಂದಿರವಾಗಿದ್ದು, ಶಿಕ್ಷಕರು ದೇವರ ಸಮಾನರು. ಆದರೆ ಗುಲಬರ್ಗಾ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಆಂತರಿಕ ಪರೀಕ್ಷೆಗಳಲ್ಲಿ ಕಡಿಮೆ ಅಂಕ ನೀಡಿ ಅನರ್ಹರನ್ನಾಗಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗುತ್ತಿದ್ದು, ಅವರ ಭವಿಷ್ಯದೊಂದಿಗೆ ಚೆಲ್ಲಾಟ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದಲ್ಲದೆ, ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಶಂಕರ ಜೋಶಿ ಎಂಬವರು ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿರುದ್ಧ ಜಾತಿ ತಾರತಮ್ಯ ನಡೆಸುತ್ತಿದ್ದಾರೆ ಎಂಬ ದೂರುಗಳು ವಿದ್ಯಾರ್ಥಿಗಳಿಂದ ಕೇಳಿಬರುತ್ತಿವೆ ಎಂದು ಹೇಳಿದರು. ಪಿಎಚ್.ಡಿ., ಕೆಸೆಟ್, ನೆಟ್ ಅರ್ಹತೆ ಹೊಂದಿರುವ ಬಡ ಅಭ್ಯರ್ಥಿಗಳನ್ನು ಬಿಟ್ಟು, ಅಗತ್ಯ ವಿದ್ಯಾರ್ಹತೆ ಇಲ್ಲದವರನ್ನು ಅತಿಥಿ ಉಪನ್ಯಾಸಕರಾಗಿ ಆಯ್ಕೆ ಮಾಡಿರುವುದೂ ಅನ್ಯಾಯಕರವಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ಕೂಡಲೇ ಎಲ್ಲಾ ಅತಿಥಿ ಉಪನ್ಯಾಸಕರ ವಿದ್ಯಾರ್ಹತೆ ಪರಿಶೀಲಿಸಿ, ಅನರ್ಹರು ಹಾಗೂ ತಾರತಮ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಂಗೀತ ವಿಭಾಗದಲ್ಲಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು ಜಾತಿ ವಿಷಬೀಜ ಬಿತ್ತುತ್ತಿರುವ ಶಿಕ್ಷಕರನ್ನು ತಕ್ಷಣವೇ ವಜಾಗೊಳಿಸಬೇಕು. ಜೊತೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳನ್ನೇ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದರೆ, ಡಾ. ವಿಷ್ಣು ಸೇನಾ ಸಮಿತಿ ಜೇವರ್ಗಿ ತಾಲ್ಲೂಕು ಘಟಕ ಹಾಗೂ ಸಂಗೀತ ವಿಭಾಗದ ನೂರಾರು ವಿದ್ಯಾರ್ಥಿ–ವಿದ್ಯಾರ್ಥಿನಿಯರೊಂದಿಗೆ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಮಾಹೂರ, ಶ್ರೀಶೈಲ ಗುತ್ತೇದಾರ್, ಮಲ್ಲಿಕಾರ್ಜುನ ಬಂಗಾರೆ, ಯಲ್ಲಾಲಿಂಗ ಡಾಂಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.



