ವಿಶ್ವಕರ್ಮದಲ್ಲಿನ ನೈಜ ಕಂಬಾರರಿಗೆ ಮಾತ್ರ ನಿಗಮದ ಸವಲತ್ತು ದೊರೆಯಲಿ: ದೇವೀಂದ್ರ ದೇಸಾಯಿ ಕಲ್ಲೂರ ಒತ್ತಾಯ

ಕಲಬುರಗಿ: ವಿಶ್ವಕರ್ಮ ಸಮುದಾಯದ ನೈಜ ಕಂಬಾರರಿಗೆ ಮಾತ್ರ ವಿಶ್ವಕರ್ಮ ಅಭಿವೃದ್ಧಿ ನಿಗಮದ ಸವಲತ್ತುಗಳನ್ನು ನೀಡಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದೇವೀಂದ್ರ ದೇಸಾಯಿ ಕಲ್ಲೂರ ಅವರು ಒತ್ತಾಯಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಕಾಯಕದಿಂದ ಗುರುತಿಸಲ್ಪಡುವ ಅನೇಕರು ಕಂಬಾರಿಕೆ, ಬಡಗೆತನ, ಅಕ್ಕಸಾಲಿಗ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಇವರು ಮೂಲತಃ ವಿಶ್ವಕರ್ಮ ಸಮುದಾಯಕ್ಕೆ ಸೇರಿಲ್ಲ. ಲಿಂಗಾಯತ ಹಾಗೂ ಮುಸ್ಲಿಂ ಸಮುದಾಯದ ಅನೇಕರು ಕಂಬಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡರೂ, ಅದು ಅವರ ಮೂಲ ಜಾತಿಯನ್ನು ಬದಲಿಸುವುದಿಲ್ಲ. ಇಂತಹವರು ನಿಗಮದ ಸವಲತ್ತು ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ” ಎಂದರು.
ಸೆಪ್ಟೆಂಬರ್ 22ರಿಂದ ಆರಂಭವಾಗಲಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನೈಜ ವಿಶ್ವಕರ್ಮ ಕಂಬಾರರನ್ನು ಸರಿಯಾಗಿ ಗುರುತಿಸುವಂತೆ ಅವರು ಅಧಿಕಾರಿಗಳಿಗೆ ಮನವಿ ಮಾಡಿದರು. ಕಾಯಕ ಅವಲಂಭಿಸಿದವರು ತಮ್ಮ ಮೂಲ ಜಾತಿ-ಧರ್ಮವೇ ನಮೂದಿಸಬೇಕೆ ಹೊರತು “ಕಂಬಾರ” ಎಂದು ಬರೆಸಬಾರದು ಎಂದು ಎಚ್ಚರಿಸಿದರು.
“ಸುಳ್ಳು ಮಾಹಿತಿ ನೀಡಿ ಸವಲತ್ತು ಪಡೆಯಲು ಯತ್ನಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜಾತಿ ದುರುಪಯೋಗ ಪ್ರಕರಣ ದಾಖಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರಿಗಳು ತಕ್ಷಣ ವರದಿ ಕಳುಹಿಸಬೇಕು” ಎಂದು ದೇವೀಂದ್ರ ದೇಸಾಯಿ ಕಲ್ಲೂರ ಒತ್ತಾಯಿಸಿದರು.