“ಬಿಸಿಯೂಟ ತಯಾರಕರ ಬೇಡಿಕೆ ಈಡೇರಿಸದಿದ್ದರೆ ಮಾರ್ಚ್ 2ರಂದು ‘ಬೆಂಗಳೂರು ಚಲೋ
ಬಿಸಿ ಊಟ ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ತುರ್ತು ಕ್ರಮ ಕೈಗೊಳ್ಳಲಿ: ಪ್ರಭುದೇವ ಯಳಸಂಗಿ ಒತ್ತಾಯ

ಕಲಬುರಗಿ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಕಲಬುರಗಿ ಜಿಲ್ಲಾ ಸಮಾವೇಶದಲ್ಲಿ ಅಂಗೀಕರಿಸಲಾದ ನಿರ್ಣಯಗಳ ಕುರಿತು ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ಬಿಸಿಯೂಟ ತಯಾರಕರ ವಿವಿಧ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಜಿಲ್ಲಾ ಗೌರವ ಅಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ, ಬಿಸಿಯೂಟ ತಯಾರಕರು ಶಿಕ್ಷಣ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದರೂ ಅವರಿಗೆ ಕನಿಷ್ಠ ವೇತನ, ಭದ್ರತೆ ಹಾಗೂ ಸಾಮಾಜಿಕ ಸುರಕ್ಷತೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಸಮಿತಿಯ ಮುಖಂಡರೊಂದಿಗೆ ಮುಖ್ಯಮಂತ್ರಿ ಚರ್ಚೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮಾರ್ಚ್ 2, 2026 ರಂದು “ಬೆಂಗಳೂರು ಚಲೋ” ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಬಿಸಿಯೂಟ ತಯಾರಕರಿಗೆ ವೇತನ ಮತ್ತು ಭತ್ಯೆಗಳನ್ನು ವಿಳಂಬವಿಲ್ಲದೆ ಪಾವತಿಸಬೇಕು, ಕಿರುಕುಳ ತಡೆಗಟ್ಟಬೇಕು, ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ ಕಾಯ್ದೆಯ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು. 2022-23ರಿಂದ ನಿವೃತ್ತಿಯಾದ ತಯಾರಕರ ಬಾಕಿ ಇಡುಗಂಟು ಹಣವನ್ನು ತಕ್ಷಣ ಪಾವತಿಸಬೇಕು ಎಂದರು.
100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಕನಿಷ್ಠ ಮೂರು ಜನ ತಯಾರಕರನ್ನು ನೇಮಕ ಮಾಡಬೇಕು. ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂಬ ನೆಪದಲ್ಲಿ ಕೆಲಸದಿಂದ ತೆಗೆದುಹಾಕಬಾರದು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಹೇಳಿದರು.
ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಮತ್ತು ಮೊಟ್ಟೆ ಭತ್ಯೆಯನ್ನು ತ್ರೈಮಾಸಿಕವಾಗಿ ಪಾವತಿಸಬೇಕು ಎಂದು ಆಗ್ರಹಿಸಿದರು.
ಶಾಲೆಯಲ್ಲಿ ಅಥವಾ ಹೊರಗಡೆ ಮರಣ ಹೊಂದಿದ ತಯಾರಕರ ಕುಟುಂಬಕ್ಕೆ ಕನಿಷ್ಠ ₹20 ಲಕ್ಷ ಪರಿಹಾರ ಹಾಗೂ ಅವಲಂಭಿತರಿಗೆ ಅನುಕಂಪ ನೇಮಕಾತಿ ನೀಡಬೇಕು. ವೈದ್ಯಕೀಯ ವೆಚ್ಚವನ್ನು ಇಲಾಖೆ ಭರಿಸಬೇಕು ಅಥವಾ ಇಎಸ್‌ಐ ಸೌಲಭ್ಯ ಒದಗಿಸಬೇಕು ಎಂದರು.
ಪ್ರತಿವರ್ಷ ಎರಡು ಜೋಡಿ ಸಮವಸ್ತ್ರ, ಎಪ್ರೋನ್ ಹಾಗೂ ಕರವಸ್ತ್ರಗಳನ್ನು ನೀಡಬೇಕು ಮತ್ತು ತ್ರೈಮಾಸಿಕವಾಗಿ ಸಮಸ್ಯೆಗಳ ಪರಿಶೀಲನಾ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿ.ಜಿ. ಅಕ್ಕಮ್ಮ (ರಾಜ್ಯ ಪ್ರಧಾನ ಕಾರ್ಯದರ್ಶಿ), ಯಶೋಧಾ ರಾಠೋಡ (ಜಿಲ್ಲಾ ಅಧ್ಯಕ್ಷರು), ಸುಜಾತಾ ಹೀರಾಪೂರ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಶಿವಲಿಂಗಪ್ಪ ಲೆಂಗಟಿಕರ್ (ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ), ಶಿಲ್ಪಾ ಕಾಂಬಳೆ (ಜಿಲ್ಲಾ ಉಪಾಧ್ಯಕ್ಷರು) ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



