ಬಿ. ಶ್ಯಾಮ ಸುಂದರ ಸಾಹೇಬರ 117ನೇ ಜಯಂತಿ ಆಚರಣೆ – ಬೌದ್ಧ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ

ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ನಲ್ಲಿರುವ ಕಲಾ ಮಂಡಲದಲ್ಲಿ ಕರ್ನಾಟಕ ಸಮತಾ ಸೈನಿಕದಳ (ಕೆಎಸ್ಎಸ್ಡಿ) ಜಿಲ್ಲಾ ಸಮಿತಿ ವತಿಯಿಂದ ಸಮಾಜ ಸುಧಾರಕ ಶ್ರೀ ಬಿ. ಶ್ಯಾಮ ಸುಂದರ ಸಾಹೇಬರ 117ನೇ ಜಯಂತಿ ಕಾರ್ಯಕ್ರಮವನ್ನು ಭಾನುವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಅವರು ಉದ್ಘಾಟಿಸಿ ಮಾತನಾಡಿ, “ಬಿ. ಶ್ಯಾಮ ಸುಂದರ ಸಾಹೇಬರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮಾರ್ಗದಲ್ಲಿ ನಡೆದ ಮಹಾನ್ ನಾಯಕರು. ಇಂದಿನ ಯುವಕರು ಬೌದ್ಧ ಧರ್ಮದ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು.
ಮುಖ್ಯ ಭಾಷಣಕಾರರಾದ ಡಾ. ಪುಟ್ಟಮಣಿ ದೇವದಾಸ ಅವರು, ಬಿ. ಶ್ಯಾಮ ಸುಂದರ ಸಾಹೇಬರ ಹೋರಾಟಗಳನ್ನು ಸ್ಮರಿಸಿ, ಶಿಕ್ಷಣದ ಮೂಲಕ ಜಾಗೃತರಾಗಬೇಕು. ಅಂಬೇಡ್ಕರ್, ಶ್ಯಾಮ ಸುಂದರ ಸಾಹೇಬರು ಹಾಗೂ ಬೌದ್ಧ ತತ್ವಗಳನ್ನು ಮನೆಯಲ್ಲಿ ಮತ್ತು ದಿನನಿತ್ಯದ ಬದುಕಿನಲ್ಲಿ ಅನುಸರಿಸುವ ಅಗತ್ಯವಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಡಾ. ದೇವೇಂದ್ರಪ್ಪ ಕಮಲಾಪುರ ಅವರು ಶ್ಯಾಮ ಸುಂದರ ಸಾಹೇಬರ ಸಾಮಾಜಿಕ ಹೋರಾಟಗಳ ಕುರಿತು ಮಾತನಾಡಿದರು. ಹಿರಿಯ ವಕೀಲ ಚಂದ್ರಕಾಂತ ಗದ್ದಗಿ ಅವರು ಎಚ್. ಶ್ರೇಯಸ್ಕರ ಹಾಗೂ ಬಿ. ಶ್ಯಾಮ ಸುಂದರ ಸಾಹೇಬರ ಸಾಧನೆಗಳನ್ನು ವಿವರಿಸಿದರು.
ಪತ್ರಕರ್ತ ಶಿವರಾಯ ದೊಡ್ಡಮನಿ ಮಾತನಾಡಿ, ಕುಟುಂಬದಲ್ಲಿ ಹೊಂದಾಣಿಕೆ ಹಾಗೂ ಬೌದ್ಧ ತತ್ವಗಳ ಅನುಷ್ಠಾನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದು ಅಭಿಪ್ರಾಯಪಟ್ಟರು.
ಕೆಎಸ್ಎಸ್ಡಿ ರಾಜ್ಯ ಗೌರವಾಧ್ಯಕ್ಷ ಶಂಕರ ಫಿರಂಗೆ (ಬೀದರ) ಅವರು, “ನಿಜಾಮ ಆಡಳಿತದ ಕಾಲದಲ್ಲಿ ಸಭಾಧ್ಯಕ್ಷರಾಗಿದ್ದ ಬಿ. ಶ್ಯಾಮ ಸುಂದರ ಸಾಹೇಬರು ಬಡವರಿಗಾಗಿ ಭೂ ಒಡೆತನ ಯೋಜನೆ ಸೇರಿದಂತೆ ಹಲವಾರು ಜನಪರ ಸೌಲಭ್ಯಗಳನ್ನು ಜಾರಿಗೆ ತಂದರು” ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೆಎಸ್ಎಸ್ಡಿ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ. ಮಾಲೆ ಅವರು ಮಾತನಾಡಿ, “ಬಿ. ಶ್ಯಾಮ ಸುಂದರ ಸಾಹೇಬರು ದೇವದಾಸಿ ಪದ್ಧತಿ, ದೇವಿಗೆ ಹರಕೆ ಹಾಕುವಂತಹ ಅನಿಷ್ಟ ಆಚರಣೆಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು” ಎಂದು ತಿಳಿಸಿದರು.
ವೇದಿಕೆಯಲ್ಲಿ ಕೆಎಸ್ಎಸ್ಡಿ ವಿಭಾಗೀಯ ಅಧ್ಯಕ್ಷ ಜೆ. ಶಂಕರ (ಕೊಪ್ಪಳ), ಗೌತಮಿ ಹಿರೋಳಿ, ಜಿಲ್ಲಾಧ್ಯಕ್ಷ ಈಲಣ್ಣ ಜಾನೆ, ಕಾರ್ಮಿಕ ಘಟಕದ ಅಧ್ಯಕ್ಷ ವಿಜಯಕುಮಾರ ಉದ್ದಾ, ಶರಣು ಮುದ್ನಾಳ, ಮಲ್ಲಿಕಾರ್ಜುನ ಉದಯಕರ, ಮಲ್ಲು ನಂದುರ, ಪದ್ಮಾ ಅಟ್ಟುರ, ಇಂದುಬಾಯಿ ಭರತನುರ, ವಿಜಯಕುಮಾರ ಸಾವಳಗಿ, ಶಿವಮೂರ್ತಿ ಬಳಿಚಕ್ರ, ಅಮೃತ ನಾಯಕೊಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಮಿಲಿಂದ ಕಣಮಸ್ ನೆರವೇರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ ಸ್ವಾಗತಿಸಿ, ಮಹಾದೇವ ನಾಟಿಕರ ವಂದಿಸಿದರು. ಬೀದರ ಜಿಲ್ಲೆಯಿಂದಲೂ ಅನೇಕ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



