ಕಲಬುರಗಿಜಿಲ್ಲಾಸುದ್ದಿ

ಭಾರತ ಕಮ್ಯುನಿಸ್ಟ್ ಪಕ್ಷ ಜಾಥಾ:ಸಮತಾ ರಾಜ್ಯ ನಿರ್ಮಾಣದ ಸಂದೇಶದೊಂದಿಗೆ ಜನಸಂಪರ್ಕ ಚಳುವಳಿ

ಜೇವರ್ಗಿ:ಭಾರತ ಕಮ್ಯುನಿಸ್ಟ್ ಪಕ್ಷ (CPI) ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನಗಳ ಜಾಥಾ ಕಾರ್ಯಕ್ರಮವನ್ನು ಭವ್ಯವಾಗಿ ಪ್ರಾರಂಭಿಸಿದೆ. ಸಮತಾ ರಾಜ್ಯದ ಕನಸು, ಶೋಷಣೆಯ ವಿರುದ್ಧದ ಶತಮಾನದ ಪಯಣ ಮತ್ತು ಜನಾಂದೋಲನಗಳ ಇತಿಹಾಸವನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ಈ ಜಾಥಾವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಹಾಗೂ ಅಲೇಮಾರಿ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಧ್ಯೇಯದೊಂದಿಗೆ CPI ಈ ಜಾಥಾವನ್ನು ಜೇವರ್ಗಿ ಮತಕ್ಷೇತ್ರದಲ್ಲಿ ಆರಂಭಿಸಿದೆ.

ಸಭೆಯಲ್ಲಿ ಮಾತನಾಡಿದ ಪಕ್ಷದ ನಾಯಕರು CPI ಯ ಇತಿಹಾಸವನ್ನು ಸ್ಮರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ ಚಳುವಳಿಯಿಂದ ಹಿಡಿದು ಕೈಯೂರು ರೈತ ಹೋರಾಟ, ಚಿತ್ರಗಾಂಗ್ ಹೋರಾಟ, ಪುದುಚೇರಿ ವಿಮೋಚನಾ ಚಳುವಳಿ, ತೆಲಂಗಾಣ ಸಶಸ್ತ್ರ ಹೋರಾಟದವರೆಗೆ ಅನೇಕ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ CPI ಯ ಸಾವಿರಾರು ನಾಯಕರು ಭಾಗವಹಿಸಿರುವುದನ್ನು ವಿವರಿಸಿದರು. ಅನೇಕರು ಪ್ರಾಣತ್ಯಾಗ ಮಾಡಿದರೆ, ಲಕ್ಷಾಂತರ ಕಾರ್ಯಕರ್ತರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಈ ಹೋರಾಟಗಳು ದೇಶದ ದುಡಿಯುವ ವರ್ಗದ ಹಕ್ಕುಗಳ ರಕ್ಷಣೆಗೆ CPI ನೀಡಿದ ಭಾರತದ ಇತಿಹಾಸದಲ್ಲೇ ಅಚ್ಚಳಿಯದ ಕೊಡುಗೆಯೆಂದು ಅವರು ಹೇಳಿದರು.

ಜೇವರ್ಗಿ ಪ್ರದೇಶದಲ್ಲಿ ಎಂ.ಎಸ್.ಕೆ. ಮಿಲ್, ಶಹಾಬಾದ್, ವಾಡಿ ಮುಂತಾದ ಕೈಗಾರಿಕಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳಿಗಾಗಿ CPI ನಡೆಸಿದ ಹೋರಾಟಗಳನ್ನೂ ಈ ಸಂದರ್ಭದಲ್ಲಿ ನೆನಪಿಸಲಾಯಿತು. ಸಾರ್ವಜನಿಕ ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ದೊರೆಕಿಸುವ ಹೋರಾಟದಲ್ಲೂ CPI ನಾಯಕರ ಪಾತ್ರ ಮಹತ್ತರವಾಗಿತ್ತು ಎಂದು ಜಾಥಾ ತಂಡ ಸ್ಪಷ್ಟಪಡಿಸಿದೆ.

ಪಕ್ಷದ ನಾಯಕರು, ಇಂದಿನ ಭಾರತದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಮಾತನಾಡಿದರು. ನಿರಂತರವಾಗಿ ಹೆಚ್ಚುತ್ತಿರುವ ಬಡತನ, ನಿರುದ್ಯೋಗ, ರೈತರ ದಿವಾಳಿ ಮತ್ತು ಆತ್ಮಹತ್ಯೆಗಳು, ಮಹಿಳೆಯರ ಮೇಲಿನ ಹಲ್ಲೆಗಳು, ಕಾರ್ಮಿಕ ಹಕ್ಕುಗಳ ನಿರ್ನಾಮ, ಸಾರ್ವಜನಿಕ ಸಂಪತ್ತಿನ ಲೂಟಿ, ಜಾತಿ-ಮತ ಬೇಧಗಳ ರಾಜಕೀಯದಿಂದ ದೇಶ ಗೊಂದಲಕ್ಕೆ ಒಳಗಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ‘’ಈ ಸಂದರ್ಭಗಳಲ್ಲಿ CPI ಮಾತ್ರ ಜನರ ಧ್ವನಿಯನ್ನು ಪ್ರಾಮಾಣಿಕವಾಗಿ ಪ್ರತಿಬಿಂಬಿಸುತ್ತಿದೆ,’’ ಎಂದು ನಾಯಕರು ಹೇಳಿದರು.

ಕಲಬುರಗಿ ಜಿಲ್ಲೆಯ ಕಮ್ಯುನಿಸ್ಟ್ ಚಟುವಟಿಕೆಗಳ ಇತಿಹಾಸಕ್ಕೂ ಸಭೆಯಲ್ಲಿ ವಿಶೇಷ ಸ್ಥಾನ ನೀಡಿತು. ರಾವ್ ಬಹಾದ್ದೂರ್ ಗೌಡ, ಮಖ್ದೂಮ್ ಮೊಯಿದ್ಯುದ್ದೀನ್, ಶ್ರೀನಿವಾಸ ಗುಡಿ, ನರಸಿಂಗರಾವ್ ಕುಲಕರ್ಣಿ, ಗಂಗಾಧರ ನಮೋಸಿ, ಶರಣಪ್ಪ ಭೈರಿ, ಕೆ.ಬಿ. ತಾಣಪ್ಪಾದಂತಹ ನಾಯಕರ ತ್ಯಾಗ, ನಿಲುವು ಮತ್ತು ಹೋರಾಟಗಳ ವಿವರಗಳನ್ನು ಜಾಥಾದಲ್ಲಿ ಸ್ಮರಿಸಲಾಯಿತು. ಇವರು ಭಾಗದ ಜನರ ಹಕ್ಕುಗಳಿಗಾಗಿ, ಜಮೀನುದಾರರ ಶೋಷಣೆಯ ವಿರುದ್ಧ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಸದಾ ಹೋರಾಡಿದ ಅವರನ್ನು CPI ನಿಜವಾದ ಪ್ರೇರಣೆ ಮೂಲವೆಂದು ಅಭಿವಂದಿಸಿದೆ.

ಜಾಥಾ ಇಲ್ಲಿನ ಡಾ ಬಿ ಆರ್ ಅಂಬೇಡ್ಕರ್ ಪುತ್ತಳಿಯಿಂದ ಮಹಿಬೂಬ್ ಫಂಕ್ಷನ್ ಹಾಲ್ ವರೆಗೂ ಮೆರವಣಿಗೆ ಮೂಲಕ ನಡೆದು ಸಮಾವೇಶಗೊಂಡಿತು, ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ. ಮಹೇಶ್ ಕುಮಾರ್ ರಾಠೊಡ, ಮಲ್ಲಿಕಾರ್ಜುನ್ ದೊಡ್ಡಮನಿ, ಮಹಮ್ಮದ್ ಚೌದರಿ, ರಾಘವೇಂದ್ರ, ರಸೀದ್ ಮುಲ್ಲಾ, ಬಸವರಾಜ ದೊರಿ,, ಹೊನ್ನಪ್ಪ ಪೂಜಾರಿ, ಖಾಜಾ ಪಟೇಲ್, ಅಂಬಮ್ಮ ಮದರಿ, ಶಾಂತಬಾಯಿ, ಕಮಲಾಬಾಯಿ, ಪರಮೇಶ್ವರ್ ಮುಂತಾದವರು ಮತ್ತು ಅನೇಕ CPI ಕಾರ್ಯಕರ್ತರು ಉಪಸ್ಥಿತರಿದ್ದರು. ‘’ಪಕ್ಷವನ್ನು ಇನ್ನಷ್ಟು ಜನರ ಬಳಿ ತಲುಪಿಸುವುದು, ಹೊಸ ಪೀಳಿಗೆಗೆ CPI ಯ ನಿಜವಾದ ಹೋರಾಟದ ಇತಿಹಾಸ ತಿಳಿಸುವುದು ನಮ್ಮ ಗುರಿ’’ ಎಂದು ಅವರು ತಿಳಿಸಿದರು.

ಸಭೆಯ ಅಂತ್ಯದಲ್ಲಿ CPI ನಾಯಕರು – “ಸಮತಾ ರಾಜ್ಯದ ಕನಸು ನಮ್ಮದು ಮಾತ್ರವಲ್ಲ, ಇದು ನಿರಂತರ ಹೋರಾಡುತ್ತಿರುವ ದುಡಿಯುವ ಜನರ ಕನಸು. ಈ ಹೋರಾಟದಲ್ಲಿ ಎಲ್ಲರೂ ನಮ್ಮ ಜೊತೆ ನಿಲ್ಲಬೇಕು” ಎಂದು ಜನರಿಗೆ ಕರೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button