ಮಹಿಳಾ ನೌಕರರ ದಿನ ಘೋಷಣೆಗೆ ಸರ್ಕಾರಕ್ಕೆ ಅಭಿನಂದನೆ-ರೇಣುಕಾ ರಮೇಶ ಡಾಂಗೆ

ಕಲಬುರಗಿ:ಸರ್ಕಾರಿ ನೌಕರರ ಸಂಘದ ಪ್ರಥಮ ಅಧ್ಯಕ್ಷೆ ಮೇರಿ ದೇವಾಸಿಯ ಅವರ ಜನ್ಮದಿನವನ್ನು ಮಹಿಳಾ ನೌಕರರ ದಿನವಾಗಿ ಘೋಷಿಸುವ ಕುರಿತು ಸಲ್ಲಿಸಿದ್ದ ಬೇಡಿಕೆಗೆ ಸರ್ಕಾರ ಸ್ಪಂದಿಸಿರುವುದು ರಾಜ್ಯದ ಮಹಿಳಾ ನೌಕರರಲ್ಲಿ ಹರ್ಷ ಹುಟ್ಟಿಸಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷೆ ರೇಣುಕಾ ರಮೇಶ ಡಾಂಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಸರ್ಕಾರಿ ಮಹಿಳಾ ನೌಕರರ ಸಮ್ಮೇಳನದಲ್ಲಿ, ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ನೌಕರರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ಸಮ್ಮೇಳನವು ಮಹಿಳಾ ನೌಕರರ ಹಿತಚಿಂತನೆಯನ್ನು ಮುಂದುವರಿಸಲು ಹಾಗೂ ಸರ್ಕಾರ–ಸಂಘದ ಸ್ನೇಹಪೂರ್ಣ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ವೇದಿಕೆಯಾಯಿತೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



