ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ಸಮಾಲೋಚನ ಸಭೆ

ಕಲಬುರಗಿ: ನಗರದಲ್ಲಿ ವಿವಿಧ ಕೊಳಚೆ ಪ್ರದೇಶಗಳ ಸಮಸ್ಯೆಗಳು ಮತ್ತು ಅದರ ಪರಿಹಾರ ಮಾರ್ಗಗಳ ಕುರಿತು ಕನ್ನಡ ಭವನದಲ್ಲಿ ಸ್ಲಂ ಜನರ ಸಂಘಟನೆ–ಕರ್ನಾಟಕ, ಕಲಬುರಗಿ ಜಿಲ್ಲಾ ಸಮಿತಿ ವತಿಯಿಂದ ಸಮಾಲೋಚನಾ ಸಭೆ ನಡೆಯಿತು.
ನಗರದ ಸ್ಲಂ ಪ್ರದೇಶಗಳಲ್ಲಿ ವರ್ಷಗಳಿಂದ ಮುಂದುವರಿದಿರುವ ಕುಡಿಯುವ ನೀರು, ಒಳಚರಂಡಿ, ಕಸದ ನಿರ್ವಹಣೆ, ರಸ್ತೆ, ವಾಸಸ್ಥಳ, ಆರೋಗ್ಯ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಯಿತು.
ಕಾರ್ಯಕ್ರಮವನ್ನು ಸ್ಲಂ ಜನರ ಸಂಘಟನೆಯ ರಾಜ್ಯ ಅಧ್ಯಕ್ಷ ಐಸಾಕ್ ಅಮೃತ್ ರಾಜ್ ಉದ್ಘಾಟಿಸಿದರು. ಮಾತನಾಡಿದ ಅವರು “ನಗರದ ತಳಹದಿ ಜನರಿಗೆ ಮೂಲಭೂತ ಸೌಲಭ್ಯ ಸಿಗದೆ ಇರುವ ಪರಿಸ್ಥಿತಿ ಗಂಭೀರವಾಗಿದೆ. ಸ್ಲಂ ಜನರ ಹಕ್ಕುಗಳಿಗಾಗಿ ಜಾಗೃತಿ ಮೂಡಿಸಿ, ಸರ್ಕಾರದ ಮೇಲ್ವಿಚಾರಣೆಯನ್ನು ಬಲಪಡಿಸಲು ಸಂಘಟನೆ ಮುಂದೆ ಬರುತ್ತದೆ. ಸಮಸ್ಯೆ ಪರಿಹಾರಕ್ಕೆ ಜನರ ಒಗ್ಗಟ್ಟು ಮುಖ್ಯ” ಎಂದು ಹೇಳಿದರು..
ಸಭೆಯಲ್ಲಿ ಜಿಲ್ಲಾ ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಗುಂಡಮ್ಮ ದೋಡ್ಮನಿ, ಯಮನಪ್ಪ ಪ್ರಸಾದ್, ಅನಿಲಕುಮಾರ್ ಚಕ್ರ, ಯೇಸುರಾಜ್, ಅನಿತಾ ಕೂರ್ಬಾ, ಗಣೇಶ್ ಕಾಂಬಳೆ, ಬ್ರಹ್ಮಾನಂದ ಮಿಂಚಾ, ಕವಿತಾ ಇನಾಮದಾರ, ಕರುಣಕುಮಾರ ಬಂದರವಾಡ, ಶಿವಕುಮಾರ ಚಿಂಚೋಳಿ, ಸೋನುಬಾಯಿ ಶೃಂಗೇರಿ, ಮಲ್ಲಿಕಾರ್ಜುನ್ ಜಾನೆ ಸೇರಿದಂತೆ ಹಲವು ವಾರ್ಡ್ಗಳ ಸ್ಲಂ ಮುಖಂಡರು ಹಾಗೂ ಮಹಿಳೆಯರು ಹಾಜರಿದ್ದರು.
ಸಭೆಯಲ್ಲಿ ಜನರು ತಮ್ಮ ಪ್ರದೇಶದ ಸಮಸ್ಯೆಗಳನ್ನು ನೇರವಾಗಿ ಮಂಡಿಸಿದ್ದು, ಅವುಗಳನ್ನು ದಾಖಲಿಸಿ ಸಂಬಂಧಿತ ಇಲಾಖೆಗೆ ಸಲ್ಲಿಸುವ ಮತ್ತು ಸಮಸ್ಯೆ ಪರಿಹಾರಕ್ಕೆ ಹೋರಾಟ ಹೂಡುವ ನಿರ್ಧಾರ ಕೈಗೊಳ್ಳಲಾಯಿತು.
ಸಮಾಲೋಚನಾ ಸಭೆಯಲ್ಲಿ ತುರ್ತು ಪರಿಹಾರಕ್ಕೆ ‘ಸ್ಲಂ ಪ್ರದೇಶ ಅಭಿವೃದ್ಧಿ ಕಾರ್ಯ ಯೋಜನೆ’ ರೂಪಿಸುವುದಾಗಿ ಸಂಘಟನೆಯ ಪದಾಧಿಕಾರಿಗಳು ತಿಳಿಸಿದರು.



