ವಿದ್ಯಾರ್ಥಿನಿಯರು ಸ್ವರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯಕ: ಜಗದೇವರೆಡ್ಡಿ

ಚಿತ್ತಾಪುರ: ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ತಮ್ಮ ಸ್ವರಕ್ಷಣೆಗೆಗಾಗಿ ಕರಾಟೆ ಕಲಿಯುವುದು ಬಹಳ ಅವಶ್ಯಕತೆ ಇದೆ ಎಂದು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ ಹೇಳಿದರು.
ಪಟ್ಟಣದ ನಾಗಾವಿ ಕ್ಯಾಂಪಸ್ ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ತಾಲೂಕು ಟೈಕೊಂಡೊ ಕರಾಟೆ ಅಸೋಸಿಯೇಷನ್ ಚಿತ್ತಾಪುರ ಇವರ ಸಹಯೋಗದಲ್ಲಿ ಮಂಗಳವಾರ ನಡೆದ ಸ್ವರಕ್ಷಣಾ (ಕರಾಟೆ) ಕೌಶಲ್ಯ ತರಬೇತಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಮಾಜ ಘಾತಕರಿಂದ ಪ್ರಾಣವನ್ನು ರಕ್ಷಿಸಿಕೊಳ್ಳುವುದರ ಜತೆಗೆ ಸ್ವಯಂ ರಕ್ಷಣೆ ಮತ್ತು ಆತ್ಮಸ್ಥೈರ್ಯ ಕಲ್ಪಿಸಿಕೊಳ್ಳಲು ಕರಾಟೆ ಸಹಕಾರಿಯಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಇಂದು ರಕ್ಷಣೆ ಇಲ್ಲದಂತಾಗಿ, ಅಪ್ರಾಪ್ತ ಶಾಲಾ-ಕಾಲೇಜು ವಿದ್ಯಾರ್ಥಿನಿಯರ ದೇಶಾದ್ಯಂತ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಂತಕರಿಂದ ಸ್ವಯಂ ರಕ್ಷಣಾ ಸಾಮರ್ಥ್ಯ ಹೊಂದುವ ಸಲುವಾಗಿ ಸರ್ಕಾರ ಪ್ರೌಢಶಾಲೆಗಳ ಹಂತದಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸುತ್ತಿದೆ ಎಂದು ಹೇಳಿದರು.
ಕರಾಟೆಯಿಂದ ಸ್ವಯಂ ರಕ್ಷಣೆಯ ಜತೆಗೆ ದೈಹಿಕ, ಮಾನಸಿಕ ಮತ್ತು ಆರೋಗ್ಯವು ವದ್ಧಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಸಂಕೋಚಪಡದೆ ಕರಾಟೆಯನ್ನು ಶ್ರದ್ಧೆಯಿಂದ ಕಲಿಯಬೇಕು ಇದು ಬಹು ಪ್ರಯೋಜನಕಾರಿ ಎಂದು ಹೇಳಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ಮಾತನಾಡಿ, ತಾಲೂಕಿನ 49 ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನಡೆಯುತ್ತಿದೆ. ವಿದ್ಯಾರ್ಥಿನಿಯರು ಕರಾಟೆ ತರಬೇತಿಯಲ್ಲಿ ಸಕ್ರೀಯವಾಗಿ ಭಾಗವಹಿಸಿ ಕರಾಟೆ ಕಲಿಯುವ ನಿಟ್ಟಿನಲ್ಲಿ ತಮ್ಮ ಸ್ವರಕ್ಷಣೆ ಮಾಡಿಕೊಳ್ಳುವ ಜೊತೆಗೆ ಇತರರ ರಕ್ಷಣೆ ಸಹ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಶಾಲಾ ಮುಖ್ಯ ಗುರು ಸಂತೋಷಕುಮಾರ ಜಮಾದಾರ್, ಕರಾಟೆ ಮುಖ್ಯ ತರಬೇತುದಾರ ವಿಜಯಕುಮಾರ್ ಹರವಾಳ ಅವರು ಮಾತನಾಡಿದರು.
ಲಕ್ಷ್ಮೀ ಸ್ವಾಗತಿಸಿದರು, ಕಾವೇರಿ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರಾದ ಶಿವರಾಜ ಹೆಬ್ಬಾಳ, ಜನ್ನತ್ ಪಿರ್ದೋಷ್, ಹಣಮಂತ, ರಮಾಬಾಯಿ, ಕರಾಟೆ ತರಬೇತುದಾರ ಸಂಜುಕುಮಾರ್ ಚೌದರಿ ಸೇರಿದಂತೆ ಅತಿಥಿ ಶಿಕ್ಷಕರು ಉಪಸ್ಥಿತರಿದ್ದರು.



