ಎರಡು ದಿನಗಳ ಕ್ರಿಸ್ಮಸ್ ಹಬ್ಬದಲ್ಲಿ ಜನರ ಭಕ್ತಿ–ಭಾವನೆ ಮೆರಗು

ಅಫಜಲಪುರ: ಪಟ್ಟಣದ ಶೆಟ್ಟಿ ಫಂಕ್ಷನ್ ಹಾಲಿನಲ್ಲಿ ಕಲ್ಬುರ್ಗಿ ಜಿಲ್ಲಾ ರಾಕಿಯನ್ ಮಿನಿಸ್ಟ್ರಸ್ ವತಿಯಿಂದ ಆಯೋಜಿಸಲ್ಪಟ್ಟ ಎರಡು ದಿನಗಳ ಕ್ರಿಸ್ಮಸ್ ಹಬ್ಬವು ಭಕ್ತಿ, ಸಂಗೀತ ಮತ್ತು ಸೌಹಾರ್ದತೆಯ ಮಧುರ ಸಂಯೋಜನೆಯಾಗಿ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮಕ್ಕೆ ಅಫಜಲಪುರ ಪಟ್ಟಣದ ಶ್ರೀ ಮಳೆಂದ್ರ ಸಂಸ್ಥಾನ ಹಿರೇಮಠದ ಪೂಜ್ಯಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
“ಕ್ರಿಸ್ಮಸ್ ಎಂದರೆ ಸಮಾಧಾನ, ಸಂತೋಷ ಮತ್ತು ಮಮತೆ. ಏಸು ಕ್ರಿಸ್ತನ ಜೀವನದಲ್ಲಿ ಪ್ರೀತಿ, ಕರಣೆ, ಮಾನವೀಯತೆ ಅತ್ಯುನ್ನತವಾಗಿತ್ತು. ಹಸಿದವರಿಗೆ ಅನ್ನ–ನೀರು ನೀಡಿದ ದಯಾಳುವಾದ ಅವರು, ನಿಮಗೆ ತೊಂದರೆ ಕೊಟ್ಟವರಿಗೂ ಒಳ್ಳೆಯದೇ ಆಗಲಿ ಎಂದು ಪ್ರಾರ್ಥಿಸಲು ಹೇಳುತ್ತಾರೆ. ಅವರ ತತ್ವ–ಬೋಧನೆಗಳು ಜಗತ್ತಿಗೆ ಮಾದರಿ” ಎಂದು ಹೇಳಿದರು.
ತಾಲೂಕಿನ ಸೇಂಟ್ ಜಾನ್ ಬಿ. ಲಿವರ್ಸ್ ಈಸ್ಟರ್ನ್ ಚರ್ಚ್ ಫಾದರ್ ಅಬ್ರಾಹಿಂ ಜೇಮ್ಸ್ ಕಾರ್ಯಕ್ರಮಕ್ಕೆ ಸಾನಿಧ್ಯ ವಹಿಸಿ, ಕ್ರಿಸ್ಮಸ್ ಹಬ್ಬದ ಧಾರ್ಮಿಕ ಮೌಲ್ಯ ಹಾಗೂ ಏಸು ಕ್ರಿಸ್ತನ ಉಪದೇಶಗಳನ್ನು ನೆನಪಿಸಿದರು.
ಹಬ್ಬದ ಅಂಗವಾಗಿ ಕ್ರಿಸ್ಮಸ್ ಭಜನೆಗಳು, ಆರಾಧನಾ ಗೀತೆಗಳು, ಮಕ್ಕಳ ನೃತ್ಯ, ಕೀರ್ತನೆ–ಸಂಗೀತ ಕಾರ್ಯಕ್ರಮಗಳು ಭಕ್ತರನ್ನು ಆಕರ್ಷಿಸಿತು. ಎರಡು ದಿನಗಳ ಹಬ್ಬವೂ ಸಂಜೆ 7ರಿಂದ ರಾತ್ರಿ 9.30ರವರೆಗೆ ಆರಾಧನೆ, ಸಂಗೀತ, ಸಂದೇಶ ಮತ್ತು ವಿಶೇಷ ಪ್ರಾರ್ಥನೆಗಳೊಂದಿಗೆ ಕಂಗೊಳಿಸಿತು.
ಹೈದರಾಬಾದ್ ರಾಕಿಯನ್ ಮಿನಿಸ್ಟ್ರಿಯ ಸಂದೇಶಕ ಸಂಜೀವಕುಮಾರ ಅವರು ದೇವರ ವಾಕ್ಯ ಹಂಚಿಕೊಂಡು ಎಲ್ಲರ ಸುಖ–ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿ ಮಾತನಾಡಿದರು. ಏಸು ಕ್ರಿಸ್ತನ ಜೀವನ, ತತ್ವ ಹಾಗೂ ಶಾಂತಿ–ಪ್ರೀತಿಯ ಸಂದೇಶ ಇಂದು ಸಮಾಜದಲ್ಲಿ ಅಗತ್ಯವಿದೆ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ರಾಜ್ಯ ಅಧ್ಯಕ್ಷ ಲಚ್ಚಪ್ಪ ಜಮಾದಾರ್, ಮುಖಂಡ ಅರವಿಂದ್ ಗುತ್ತೇದಾರ್, ಪಾಸ್ಟರ್ ಶಿರೋಮಣಿ, ಗುರುಲಿಂಗಪ್ಪ ಸೂಲೆಕಾರ, ಕಾಂತರಾಜ ಕಲ್ಬುರ್ಗಿ, ಕುರುಬ ಸಮಾಜ ತಾಲೂಕು ಅಧ್ಯಕ್ಷ ಬೀರಣ್ಣ ಪೂಜಾರಿ, ಎಕ್ಸಲೆಂಟ್ ಕೋಚಿಂಗ್ ಶಾಲೆಯ ಸಂಚಾಲಕ ಕರೆಪ್ಪ ಪೂಜಾರಿ,ಪ್ರಜ್ವಲ್,ಸಂತರಾಮ, ರೈಚಲ್ ರಾಣಿ, ಕೆಲವಿನ್, ಲಲಿತಾ,ಸಾಮೊವೆಲ್,ಸತೀಶ ಸಾಮೊವೆಲ್, ಸತೀಶ,ಅಜಯ, ಸಂತೋಷ, ಸೇರಿದಂತೆ ಸೇವಕರು, ಯುವಕರು, ಚರ್ಚ್ ಸದಸ್ಯರು ಉಪಸ್ಥಿತರಿದ್ದರು.
ತಾಲೂಕು ಹಾಗೂ ಜಿಲ್ಲೆಯ ನೂರಾರು ಭಕ್ತರು ಕ್ರಿಸ್ಮಸ್ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬದ ಪಾವಿತ್ರ್ಯತೆಯನ್ನು ಹಂಚಿಕೊಂಡರು.



