“ಕನ್ನಡ ಶಾಲೆ ಉಳಿಸಿ – ಬೆಳೆಸಿ” ಅಭಿಯಾನದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ವಿ. ಇವಣಿ ನೇಮಕ

ಚಿತ್ತಾಪುರ:ನಾಡು–ನುಡಿ ಹಾಗೂ ಸರ್ಕಾರಿ ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ “ಕನ್ನಡ ಶಾಲೆ ಉಳಿಸಿ – ಬೆಳೆಸಿ” ಅಭಿಯಾನಕ್ಕೆ ಹೊಸ ಚೈತನ್ಯ ದೊರೆತಿದ್ದು, ಕಲಬುರ್ಗಿ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಅಣ್ಣಾರಾಯ ವಿ. ಇವಣಿ ಅವರನ್ನು ನೇಮಕ ಮಾಡಲಾಗಿದೆ.
ಕನ್ನಡ ಶಾಲೆಗಳ ಉಳಿವಿಗಾಗಿ ಜನಜಾಗೃತಿ ಮೂಡಿಸುವುದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದು ಹಾಗೂ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಉದ್ದೇಶದೊಂದಿಗೆ ಈ ಅಭಿಯಾನ ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ರಾಜ್ಯ ನಾಯಕರು, ಹಿರಿಯರು ಹಾಗೂ ಕಾರ್ಯಕರ್ತರ ಒಮ್ಮತದ ನಿರ್ಧಾರದಂತೆ ಅಣ್ಣಾರಾಯ ವಿ. ಇವಣಿ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದೆ.
ನೂತನ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿರುವ ಅಣ್ಣಾರಾಯ ವಿ. ಇವಣಿ ಅವರು,“ಕನ್ನಡ ಶಾಲೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾಡು–ನುಡಿ ಉಳಿಸುವ ಹೋರಾಟದಲ್ಲಿ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಕನ್ನಡಪರ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು” ಎಂದು ಹೇಳಿದರು.
ರಾಜ್ಯಮಟ್ಟದ ಅಭಿಯಾನದ ಉದ್ದೇಶಗಳಿಗೆ ತಕ್ಕಂತೆ ಕಲಬುರ್ಗಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಬಲವರ್ಧನೆಗಾಗಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.



