ಕಲಬುರಗಿಜಿಲ್ಲಾಸುದ್ದಿ

ನಾವು ನಿಜವಾದ ದೇಶಭಕ್ತರು,ಆರ್‌ಎಸ್‌ಎಸ್ ನವರು ನಕಲಿ-ದಲಿತ ಪ್ಯಾಂಥರ್

ಚಿತ್ತಾಪುರ: “ಆರ್‌ಎಸ್‌ಎಸ್ ಕಾರ್ಯಕರ್ತರು ಕೈಯಲ್ಲಿ ಬಡಗಿ ಹಿಡಿದು ಪಥಸಂಚಲನ ಮಾಡಿ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಾರೆ. ಆದರೆ ನಮ್ಮ ಭೀಮ ನಡಿಗೆ ಶಾಂತಿಯುತ, ಶಿಸ್ತಿನಿಂದ ನಡೆದ ಐತಿಹಾಸಿಕ ಪಥಸಂಚಲನ” ಎಂದು ದಲಿತ ಪ್ಯಾಂಥರ್ ರಾಜ್ಯಾಧ್ಯಕ್ಷ ಮಲ್ಲಪ್ಪ ಹೊಸಮನಿ ಹೇಳಿದರು. ಬುಧವಾರ ಬುದ್ಧ ವಿಹಾರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಭೀಮ ನಡಿಗೆ ಪಥಸಂಚಲನದಲ್ಲಿ ಅಂಬೇಡ್ಕರ್ ಅನುಯಾಯಿಗಳು ಮತ್ತು 22 ಸಮಾಜಗಳ ಜನರು ಸ್ವಯಂಪ್ರೇರಿತವಾಗಿ ಭಾಗವಹಿಸಿದ ಕಾರಣ ಬಿಜೆಪಿ ನಾಯಕರಿಗೆ ಹತಾಶೆಗೊಂಡು ಸುಳ್ಳು ಆರೋಪಗಳಿಗೆ ಮೊರೆಹೊಗಿದ್ದಾರೆ ಎಂದು ಕಿಡಿಕಾರಿದರು. “ನಾವು ಹಣ ನೀಡಿ ಯಾರನ್ನೂ ಕರೆಸಿಲ್ಲ. ಪಥಸಂಚಲನ, ಸಂವಿಧಾನ ಸಮಾವೇಶ ಎರಡೂ ಭರ್ಜರಿ ಯಶಸ್ವಿಯಾದವು. ಸಂವಿಧಾನ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ಕೊಡದ ಬಿಜೆಪಿ ಕಡೆಗೆ ನಾವು ನೋಡಬೇಕಿಲ್ಲ” ಎಂದು ಹೇಳಿದರು.

ಪ್ರಿಯಾಂಕ ಖರ್ಗೆ ಸಂವಿಧಾನ ಪರ ನಿಲುವು ಹೊಂದಿರುವುದರಿಂದ ಅವರ ಪರ ಘೋಷಣೆ ಕೂಗಿದದ್ದು ಸಹಜ ಎಂದೂ ಹೊಸಮನಿ ಪ್ರತಿಕ್ರಿಯಿಸಿದರು.

ಮಾದಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ ಮಾತನಾಡಿ, “ಸಂವಿಧಾನ ಪರ ಹೋರಾಡುವವರ ಪರ ಘೋಷಣೆ ಕೂಗುವುದು ನಮ್ಮ ಹಕ್ಕು. ಎಲ್ಲ ಸಮಾಜಗಳೂ ಭೀಮ ನಡಿಗೆಯಲ್ಲಿ ಭಾಗವಹಿಸಿದ್ದರಿಂದ ಬಿಜೆಪಿಗೆ ಹೊಟ್ಟೆಕಿಚ್ಚು” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್, ಬಂಜಾರ ಸಮಾಜದ ಅಧ್ಯಕ್ಷ ಭೀಮಸಿಂಗ ಚವ್ಹಾಣ, ಎಂ.ಎ. ರಷೀದ್, ನಿಂಗಣ್ಣ ಹೆಗಲೇರಿ, ಜಗನ್ನಾಥ ಮುಡಬೂಳಕರ್, ಮಹಾದೇವ ರಾಠೋಡ, ಮಲ್ಲಿಕಾರ್ಜುನ ಮುಡಬೂಳಕರ್, ಶರಣು ಡೋಣಗಾಂವ, ದೇವು ಯಾಬಾಳ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button