“ನಕಲಿ ಜಾತಿ ಪ್ರಮಾಣ ಪತ್ರ ಹಾವಳಿವಿರೋಧಿಸಿ ವಾಲ್ಮೀಕಿ ನಾಯಕ ಸಂಘಟನೆಗಳ ಪ್ರತಿಭಟನೆ”

ಕಲಬುರಗಿ: ರಾಜ್ಯದಲ್ಲಿ ನಾಯಕ ತಳವಾರ ಹೆಸರಿನಲ್ಲಿ ಇತರೆ ಸಮುದಾಯದವರು ಅಕ್ರಮವಾಗಿ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ಹಾಗೂ ಸಿಂಧುತ್ವ ಪ್ರಮಾಣ ಪತ್ರಗಳನ್ನು ಪಡೆದು ವಂಚಿಸುತ್ತಿರುವುದನ್ನು ಖಂಡಿಸಿ, ಹೈ.ಕ.ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ನಕಲಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಹಾಗೂ ಅವನ್ನು ನೀಡಿದ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಭಾರತ ಸಂವಿಧಾನದ ಪರಿಚ್ಛೇದ 341 ಮತ್ತು 342ರಡಿ ನೈಜ ಪರಿಶಿಷ್ಟ ಪಂಗಡದ ಸಮುದಾಯಗಳ ಹಕ್ಕುಗಳನ್ನು ಕಬಳಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದರಿಂದ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ನಾಯಕ ತಳವಾರ ಸಮುದಾಯದವರಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಟನೆಯವರು ಆರೋಪಿಸಿದರು.
ಈ ಕುರಿತು ಕರ್ನಾಟಕ ಉಚ್ಚ ನ್ಯಾಯಾಲಯವೂ ನಕಲಿ ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚನೆ ನೀಡಿದ್ದರೂ, ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಇರುವುದರಿಂದ ಕಾನೂನಿಗೆ ಅವಮಾನವಾಗುತ್ತಿದೆ ಎಂದು ವಾಲ್ಮೀಕಿ ನಾಯಕರ ಸಂಘ ಆರೋಪಿಸಿದೆ.
ಸಂಘಟನೆಗಳು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ತಕ್ಷಣ ಸ್ವತಂತ್ರ ಸಚಿವರನ್ನು ನೇಮಿಸಬೇಕು, ನಕಲಿ ಪ್ರಮಾಣ ಪತ್ರ ಹಗರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬಾಕಿ ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ಬಿಡುಗಡೆ ಮಾಡಬೇಕು, ಹಾಗೂ ವಾಲ್ಮೀಕಿ ಅಧ್ಯಯನ ಪೀಠ ಮತ್ತು ಭವನಗಳ ನಿರ್ಮಾಣಕ್ಕೆ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿವೆ.
ಈ ಸಂದರ್ಭದಲ್ಲಿ ಎಸ್‌ಸಿ/ಎಸ್‌ಟಿ ನಕಲಿ ಜಾತಿ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ಡಿ. ನಾಯಕ, ಜಿಲ್ಲಾ ಅಧ್ಯಕ್ಷ ಶರಣು ಸುಬೇದಾರ, ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ, ನಂದಕುಮಾರ ನಾಯಕ, ಮಾರುತಿ ಜಮಾದಾರ, ರಾಜು ಮಾವನೂರ, ತಿಪ್ಪಣ್ಣಾ ಇಟಗಾ, ಮಾರುತಿ ಜಾಕನಳ್ಳಿ, ಮಲ್ಲಿಕಾರ್ಜುನ ಸುಬೇದಾರ ಸೇರಿದಂತೆ ಅನೇಕರು ಹಾಜರಿದ್ದರು.