ಯಾದಗಿರಿ

ಕೋಲಿ ಸಮಾಜ ಜಾಗೃತವಾಗಬೇಕಾದ ಸಮಯ ಬಂದಿದೆ: ಉಮೇಶ್ ಮುದ್ನಾಳ

ಯಾದಗಿರಿ:ಬಡ ಕೋಲಿ–ಕಬ್ಬಲಿಗ ಸಮಾಜವನ್ನು ಕೇವಲ ಮತಬ್ಯಾಂಕ್‌ಗಾಗಿ ಬಳಸುವ ರಾಜಕಾರಣಿಗಳಿಗೆ ಒಡೆಯುವ ಕಾಲ ಬಂದಿದೆ. ಸಮಾಜ ಜಾಗೃತವಾಗದಿದ್ದರೆ ನಮ್ಮ ಅಸ್ತಿತ್ವವೇ ಕಳೆದುಕೊಳ್ಳುವ ಭೀತಿಯಿದೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಕೆ. ಮುದ್ನಾಳ ಅವರು ಹೇಳಿದರು.

ರವಿವಾರ ಪಂಚಗ್ರಾಮಗಳಲ್ಲಿ ನಡೆದ ಕೋಲಿ ಸಮಾಜದ ಜನಜಾಗೃತಿ ಸಭೆಗಳಲ್ಲಿ ಮಾತನಾಡಿದ ಅವರು, ಕೋಲಿ ಸಮಾಜವನ್ನು ಇದುವರೆಗೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಸಮಾಜವನ್ನು ನೆನಪಿಸಿಕೊಳ್ಳಲಾಗುತ್ತದೆ. ಆದರೆ ಚುನಾವಣೆ ಮುಗಿದ ನಂತರ ಸಮಾಜದ ಸಮಸ್ಯೆಗಳ ಕಡೆ ಯಾರೂ ಗಮನ ಹರಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಿಕ್ಷಣವೇ ಸಮಾಜದ ನಿಜವಾದ ಶಕ್ತಿ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಸಮಾಜದಲ್ಲಿ ಗೌರವ ಹಾಗೂ ಸ್ಥಾನಮಾನ ದೊರೆಯುತ್ತದೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಯಾದಗಿರಿ ಸಮೀಪದ ಅಬ್ಬೆತುಮಕೂರು, ಹೆಡಗಿಮದ್ರಿ, ತಳಕ, ಅಚ್ಚೋಲಾ, ಅರಕೇರಾ (ಬಿ) ಗ್ರಾಮಗಳಲ್ಲಿ ರವಿವಾರ ನಡೆದ ಜನಜಾಗೃತಿ ಸಭೆಯಲ್ಲಿ, ಜನವರಿ 21ರಂದು ರಾಜ್ಯ ಸರ್ಕಾರದಿಂದ ಆಚರಿಸಲಾಗುವ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವದ ಅಂಗವಾಗಿ ಚೌಡಯ್ಯನವರ ಕಿರು ಪರಿಚಯ ಹಾಗೂ ವಚನಗಳ ದಿನದರ್ಶಿಯನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಸಮಾಜದ ಹಿರಿಯರು, ಸಮಾಜವನ್ನು ಸಂಘಟಿತವಾಗಿ ಕಟ್ಟಬೇಕು. ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು. ನಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಸಲಹೆ ನೀಡಿದರು. ಯುವಕರು ದುಶ್ಚಟಗಳಿಂದ ದೂರವಿದ್ದು ಶಿಕ್ಷಣ, ಉದ್ಯೋಗ ಹಾಗೂ ಸ್ವಾವಲಂಬನೆಯತ್ತ ಗಮನ ಹರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪವನ್, ಸೋನು, ನಾಗಪ್ಪ, ಮಣಿ, ಮರೆಪ್ಪ, ಗಂಗಣ್ಣ, ದೇವಪ್ಪ, ಸಿದ್ದಪ್ಪ, ಮಲ್ಲಿಕಾರ್ಜುನ, ಶಿವಾನಂದ, ಮೊನೇಶ್, ಶಿವಾರೆಡ್ಡಿ, ಶರಣಪ್ಪ, ಹನುಮಂತ, ಭೀಮರಾಯ, ಸಾಬಣ್ಣ, ಭಾಗಪ್ಪ, ಚಂದ್ರು, ದೇವರಾಜ, ಕಾಮಣ್ಣ, ಮಲ್ಲಣ್ಣ, ಸಿದ್ದಣ್ಣ, ಮಂಜುನಾಥ್, ಸಂತೋಷ್, ರಾಮ್ ರೆಡ್ಡಿ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button