ಕಲಬುರಗಿಜಿಲ್ಲಾಸುದ್ದಿ

ವೈಭವದ ಆರಾಧನಾ ಮಹೋತ್ಸವಕ್ಕೆ ಸಿದ್ಧವಾಗುತ್ತಿದೆ ಧಾರ್ಮಿಕ ಕ್ಷೇತ್ರ : ಚಿಕ್ಕೇಶ್ವರ ಸ್ವಾಮಿಗಳ ಆರಾಧನೆಗೆ ಸಕಲ ಸಿದ್ಧತೆಗಳು

ಅಫಜಲಪುರ: ಪ್ರತಿ ವರ್ಷದಂತೆಯೇ ಈ ವರ್ಷವೂ ಡಿಸೆಂಬರ್ 7ರಂದು (ರವಿವಾರ) ಜಗದ್ಗುರು ಶ್ರೀ ಶ್ರೀ ಶ್ರೀ ಚಿಕ್ಕೇಶ್ವರ ಮಹಾಸ್ವಾಮಿಗಳ ಆರಾಧನೆ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಅದರ ಪೂರ್ವಭಾವಿ ಸಭೆ ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ಭಕ್ತಿಭಾವದಿಂದ ಜರುಗಿತು ಎಂದು ಮೂರು ಝಾವದೇಶ್ವರ ಮಠದ ಶ್ರೀ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಸಭೆಯಲ್ಲಿ ಚಿಕ್ಕೇಂದ್ರ ಮಹಾಸ್ವಾಮಿಗಳು, ಆಲಮೇಲ ಹಾಗೂ ಸಿಂದಗಿಯ ಪರಮಪೂಜ್ಯ ರಾಮಚಂದ್ರ ಮಹಾಸ್ವಾಮಿಗಳು ಹಾಗೂ ಪರಮಪೂಜ್ಯ ಕುಮಾರ ಸ್ವಾಮಿಗಳು ನೇತೃತ್ವ ವಹಿಸಿ, ಸಮಸ್ತ ವಿಶ್ವಕರ್ಮ ಸಮಾಜದ ಭಕ್ತರ ಸಮ್ಮುಖದಲ್ಲಿ ಸಭೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಸಭೆಯಲ್ಲಿ ಮಾತನಾಡಿದ ಸ್ವಾಮೀಜಿಗಳು ಮುಂಬರುವ ಡಿಸೆಂಬರ್ 7ರಂದು ನಡೆಯಲಿರುವ ಆರಾಧನೆ ಮಹೋತ್ಸವದ ಅಂಗವಾಗಿ ಉಚಿತ ಉಪನಯನ ಕಾರ್ಯಕ್ರಮ, ಚಿಕ್ಕೇಂದ್ರ ಮಹಾಸ್ವಾಮಿಗಳ ತುಲಾಭಾರ, ಸಂಗೀತ ಸಭೆ, ಸಾಧಕರಿಗೆ ಸನ್ಮಾನ ಸೇರಿದಂತೆ ಹಲವು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಮಹೋತ್ಸವದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಕೆ.ಪಿ. ನಂಜುಂಡಿ ವಿಶ್ವಕರ್ಮ (ಬೆಂಗಳೂರು), ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ವಸಂತ ಮುರಳಿ ಆಚಾರ್ಯ (ಬೆಂಗಳೂರು), ರಿಷಿ ವಿಶ್ವಕರ್ಮ (ಮೈಸೂರು), ವಿಶ್ವಕರ್ಮ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ (ಕಲಬುರಗಿ) ಸೇರಿದಂತೆ ನಾಡಿನ ಹರಗುರು ಚರಮೂರ್ತಿಗಳು, ಶಾಸಕರು, ರಾಜಕೀಯ ಧುರೀಣರು, ಜಿಲ್ಲೆಯ ವಿಶ್ವಕರ್ಮ ಮಹಾಸಭಾದ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಲಿದ್ದಾರೆ.

ಈ ಮಹೋತ್ಸವವು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ನಲ್ಲಿ ವಿಜೃಂಭಣೆಯಿಂದ ನಡೆಯಲಿದ್ದು, ಸಮಸ್ತ ವಿಶ್ವಕರ್ಮ ಸಮಾಜದ ಬಂಧುಗಳು ಭಕ್ತಿಭಾವದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಠದ ವತಿಯಿಂದ ಮನವಿ ಮಾಡಿಕೊಳ್ಳಲಾಗಿದೆ.

Related Articles

Leave a Reply

Your email address will not be published. Required fields are marked *

Back to top button