ಕನ್ನಡ ಭವನದಲ್ಲಿ ಸಾಂಸ್ಕೃತಿಕ ವೈಭವ: ಸಂಗೀತ–ನೃತ್ಯ ಕಾರ್ಯಕ್ರಮ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಕಲ್ಯಾಣ ನಾಡಿನ ಸಾಂಸ್ಕೃತಿಕ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗಲಿಂಗಯ್ಯ ಮಠಪತಿ ಮಾತನಾಡಿ, ಸಂಗೀತವು ಮನುಷ್ಯನ ಜೀವನದಲ್ಲಿ ಮಹತ್ವದ ಪಾತ್ರವಹಿಸಿದ್ದು, ಭವಿಷ್ಯವನ್ನೇ ರೂಪಿಸುವ ಶಕ್ತಿ ಹೊಂದಿದೆ ಎಂದರು. ನಾಡಿಗೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾಗಿದ್ದು, ಅನೇಕ ಪ್ರತಿಭಾವಂತ ಕಲಾವಿದರನ್ನು ಗುರುತಿಸುವುದು ನಮ್ಮ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ಸಾನಿಧ್ಯ ವಹಿಸಿದ ಪ.ಪೂ. ರೇವಣಸಿದ್ದ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ, ಪುರಂದರದಾಸರು, ಕನಕದಾಸರು ಸೇರಿದಂತೆ ಅನೇಕ ಸಂತರು ಸಂಗೀತದ ಮೂಲಕ ಉನ್ನತ ಸಾಧನೆ ಮಾಡಿದ ಇತಿಹಾಸವಿದೆ ಎಂದು ಹೇಳಿದರು. ಸಂಗೀತ ಮನಸ್ಸಿಗೆ ಆನಂದ ಹಾಗೂ ತೃಪ್ತಿ ನೀಡುವುದರ ಜೊತೆಗೆ ಜೀವನಮಟ್ಟವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದರು.
ಅತಿಥಿಯಾಗಿ ಭಾಗವಹಿಸಿದ ದೇವಿಂದ್ರಪ್ಪ ಮುಡುಬುಳ ಅವರು, ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಭಾಗ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉದ್ಯಮಿ ಸೋಮಶೇಖರ ತೆಂಗಳಿ, ಕಲೆ ಮತ್ತು ಸಂಸ್ಕೃತಿ ಜೀವನದಲ್ಲಿ ವಿಶೇಷ ಸ್ಥಾನ ಹೊಂದಿದ್ದು, ಕುಮಾರಿ ಅನನ್ಯ ಅವರ ಭರತನಾಟ್ಯ ಪ್ರದರ್ಶನ ಮೆಚ್ಚುಗೆಯನ್ನು ಪಡೆದಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಕುಮಾರ್ ತೆಗಲತಿಪ್ಪಿ, ಸತೀಶ್ ಪಾಟೀಲ್ ಆಲಗೂಡ್, ಚನ್ನಬಸಪ್ಪ ಉಡುಗಿ, ವಿಶ್ವನಾಥ್ ಗೌನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರೇಣುಕಾ ಹಾಗರಗುಂಡಗಿ ಪ್ರಾರ್ಥನಾ ಗೀತೆ ಹಾಡಿದರು. ಶಿವಾನಂದ ಬಂದೆ ಕೇದಾರ್ ರಾಗದಲ್ಲಿ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಪಡೆದರು. ನಾಗರಾಜ್ ಗುಡೂರ್, ಶಿವಕುಮಾರ್ ಹಿರೇಮಠ, ಬಸಯ್ಯ ಗುತ್ತೇದಾರ್, ಕಲ್ಪನಾ ಗೋಲ್ಡ್ಸ್ಮಿತ್, ದತ್ತರಾಜ್ ಕಲ್ ಶೆಟ್ಟಿ ಸೇರಿದಂತೆ ಹಲವರು ಸಂಗೀತ ಕಾರ್ಯಕ್ರಮ ನೀಡಿದರು. ಶಂಕರ್ ರುದ್ರವಡಿ ಸಿತಾರ್ ವಾದನದಿಂದ ಗಮನ ಸೆಳೆದರು.
ಪರಶುರಾಮ್ ಗರೂರ್, ಚೇತನ್ ಕುಮಾರ್ ಬೀದಿಮನಿ, ರವಿ ಸ್ವಾಮಿ ಗೋಟೂರು, ಚಂದ್ರಕಾಂತ್ ನಿರುಗುಡಿ, ಗುರುರಾಜ್ ಬಿರಾದರ್ ವಾದ್ಯ ಸಂಗೀತದಲ್ಲಿ ಸಹಕರಿಸಿದರು. ಕೊನೆಯಲ್ಲಿ ಶಿವಶಂಕರ್ ಬಿರಾದರ್ ಮಂಗಲಗಾನದಿಂದ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಕಾರ್ಯಕ್ರಮವನ್ನು ಚಿದಾನಂದ ಎಸ್. ಚರಣಮಗೇರಿ ನಿರೂಪಿಸಿದರು. ರಾಜಕುಮಾರ್ ಉದನೂರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಬಸವರಾಜ್ ತೆಂಗಳಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದಾಗಿ ತಿಳಿಸಿದ್ದಾರೆ.



