ಕಲಬುರಗಿಜಿಲ್ಲಾಸುದ್ದಿ

ಸಮುದಾಯದ ಏಳಿಗೆಗಾಗಿ 41 ದಿನಗಳ ಪಾದಯಾತ್ರೆ – ನಿತಿನ್ ಗುತ್ತೇದಾರ್ ಕರೆ

ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆ ಬಿತ್ತಿ ಪತ್ರ ಬಿಡುಗಡೆ

500ಕೋಟಿ ನಿಗಮಕ್ಕೆ ಅಗತ್ಯ ಡಾ. ಪ್ರಣವಾನಂದ ಶ್ರೀಗಳು ನಿರಂತರವಾಗಿ ಈಡಿಗ ,ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದು ಈ ಬಾರಿ ನಾರಾಯಣ ಗುರು ನಿಗಮಕ್ಕೆ 500 ಕೋಟಿ ನೀಡಬೇಕೆಂಬ ಒತ್ತಾಯ ಈ ಪಾದಯಾತ್ರೆಯ ಪ್ರಮುಖ ಉದ್ದೇಶ. ಸಮುದಾಯದ ಜನರನ್ನು ನಿರ್ಲಕ್ಷಿಸುವುದರ ವಿರುದ್ಧ ಇದು ಎಚ್ಚರಿಕೆಯ ಪಾದಯಾತ್ರೆ ಆಗಿದೆ. – ಸತೀಶ್ ವಿ ಗುತ್ತೇದಾರ್, ಅಧ್ಯಕ್ಷರು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ.

ಕಲಬುರಗಿ : ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಸಮಗ್ರ ಏಳಿಗೆ ಮತ್ತು ಭದ್ರತೆಗಾಗಿ ಕೈಗೊಳ್ಳಲಾಗಿರುವ ಡಾ. ಪ್ರಣವಾನಂದ ಶ್ರೀಗಳ ಪಾದಯಾತ್ರೆಯ ಬಿತ್ತಿ ಪತ್ರವನ್ನು ಕಲಬುರಗಿಯಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಅವರು — “ಪೂಜ್ಯ ಡಾ. ಪ್ರಣವಾನಂದ ಶ್ರೀಗಳು ಸಮುದಾಯದ ಹಿತಕ್ಕಾಗಿ ಅಹೋರಾತ್ರಿ ಶ್ರಮಿಸುತ್ತಿದ್ದು, ಅವರ ಪಾದಯಾತ್ರೆ ಸಮಾಜದ ಏಕತೆ ಮತ್ತು ಅಭಿವೃದ್ಧಿಗೆ ಮಾರ್ಗದರ್ಶಕವಾಗಲಿದೆ. ಈ ಹೋರಾಟದಲ್ಲಿ ಎಲ್ಲರೂ ಕೈಜೋಡಿಸಬೇಕು” ಎಂದು ಕರೆ ನೀಡಿದರು.

ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದಿಂದ ಮುಂದಿನ ಜನವರಿ 6ರಿಂದ ಬೆಂಗಳೂರಿನವರೆಗೆ ನಡೆಯುವ ಈ 41 ದಿನಗಳ ಪಾದಯಾತ್ರೆ ಚಿತ್ತಾಪುರ, ವಾಡಿ, ಶಹಬಾದ್, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸಗೂರು, ತಾವರಗೇರಾ, ಗಂಗಾವತಿ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಲಿದೆ.

ನಿತಿನ್ ಗುತ್ತೇದಾರ್ ಅವರು — “ಪೂರ್ವದಲ್ಲಿ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ನಡೆದ 780 ಕಿಲೋಮೀಟರ್ ಪಾದಯಾತ್ರೆಯ ಪರಿಣಾಮವಾಗಿ ಈಡಿಗ ನಿಗಮ ರಚನೆ ಮತ್ತು 25 ಕೋಟಿ ರೂ. ಕುಲಶಾಸ್ತ್ರೀಯ ಅಧ್ಯಯನಕ್ಕೆ ಮಂಜೂರು ಮಾಡಲಾಯಿತು. ಇದೇ ಉತ್ಸಾಹದಲ್ಲಿ ಎಲ್ಲರೂ ಈ ಪಾದಯಾತ್ರೆಯನ್ನು ಯಶಸ್ವಿಗೊಳಿಸೋಣ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸತೀಶ್ ವಿ. ಗುತ್ತೇದಾರ್ (ಅಧ್ಯಕ್ಷ), ಮಹಾದೇವ ಗುತ್ತೇದಾರ್ (ಉಪಾಧ್ಯಕ್ಷ), ವೆಂಕಟೇಶ ಕಡೇಚೂರ್ (ಕಾರ್ಯದರ್ಶಿ), ಡಾ. ಸದಾನಂದ ಪೆರ್ಲ, ವೆಂಕಟೇಶ ಗುಂಡಾನೂರು, ಅಂಬಯ್ಯ ಗುತ್ತೇದಾರ್, ಅನಿಲ್ ಯರಗೋಳ, ರಾಜೇಶ್ ದತ್ತು ಗುತ್ತೇದಾರ್, ಬಸಯ್ಯ ಗುತ್ತೇದಾರ್, ಆನಂದ ಗುತ್ತೇದಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button