ಈಡಿಗ-ಬಿಲ್ಲವ ಬೇಡಿಕೆ ಈಡೇರಿಕೆಗೆ 42 ದಿನಗಳ ಪಾದಯಾತ್ರೆ:ಡಾ. ಪ್ರಣವಾನಂದ ಶ್ರೀ

ಕಲಬುರಗಿ:ಚಿತ್ತಾಪುರ ತಾಲೂಕಿನ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಲ್ಲಿ ಪೀಠಾಧಿಪತಿಗಳಾದ ಡಾ. ಪ್ರಣವಾನಂದ ಶ್ರೀಗಳು ಪತ್ರಿಕಾಗೋಷ್ಠಿ ನಡೆಸಿ, ಈಡಿಗ-ಬಿಲ್ಲವ ಸೇರಿ 26 ಪಂಗಡಗಳ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರವು ನಿರ್ಲಕ್ಷ್ಯ ತೋರಿಸುತ್ತಿರುವುದನ್ನು ಖಂಡಿಸಿದರು. ಜನವರಿ 6ರಿಂದ 42 ದಿನಗಳ ಕಾಲ 700 ಕಿಮೀ ದೂರ ಪಾದಯಾತ್ರೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪುವುದಾಗಿ ಎಂದು ಡಾ. ಪ್ರಣವಾನಂದ ಶ್ರೀ ಹೇಳಿದರು.
ಸೋಮವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದವರು ಪಾದಯಾತ್ರೆ ವೇಳೆ 16 ಪ್ರಮುಖ ಬೇಡಿಕೆಗಳನ್ನು ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಇದರಲ್ಲಿ – ಈಡಿಗ ನಿಗಮಕ್ಕೆ 500 ಕೋಟಿ ಅನುದಾನ, ಬೆಂಗಳೂರಿನಲ್ಲಿ ನಾರಾಯಣ ಗುರು ಪ್ರತಿಮೆ ಪ್ರತಿಷ್ಠಾಪನೆ, ಸಮಾಜವನ್ನು 2ಎ ಯಿಂದ ಪರಿಶಿಷ್ಟ ವರ್ಗಕ್ಕೆ ಶಿಫಾರಸು, ಮದ್ಯ ಮಾರಾಟದಲ್ಲಿ ಶೇಕಡ 50 ಮೀಸಲಾತಿ, ಕುಲಕಸಬು ಕಳೆದುಕೊಂಡವರಿಗೆ ಪುನರ್ವಸತಿ, ನಾರಾಯಣ ಗುರು ಅಧ್ಯಯನಪೀಠ ಸ್ಥಾಪನೆ ಮುಂತಾದವು ಸೇರಿವೆಎಂದರು .
“ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದರೂ ಅನುದಾನ ನೀಡದೆ ನಿರ್ಲಕ್ಷ್ಯ ತೋರಿತು. ಈಗಿನ ಕಾಂಗ್ರೆಸ್ ಸರ್ಕಾರವೂ ಎರಡುವರೆ ವರ್ಷಗಳಾದರೂ ಸ್ಪಂದಿಸದೆ ಕಡೆಗಣಿಸಿದೆ. ಹೀಗಾಗಿ ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಯುತ್ತದೆ” ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಕಲಬುರಗಿಯ ಆಮಂತ್ರಣ ಹೋಟೆಲ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಮುಖಂಡರ ಸಭೆ ಕರೆಯಲಾಗಿದೆ. ಪಾದಯಾತ್ರೆಯ ಉದ್ಘಾಟನೆಗೆ ಕೇಂದ್ರ ಸಚಿವ ಯಸ್ಸೊ ಶ್ರೀಪಾದ ನಾಯಕರು ಹಾಗೂ ಹಲವು ಸಚಿವರು, ಶಾಸಕರು, ಸ್ವಾಮೀಜಿಗಳನ್ನು ಆಹ್ವಾನಿಸಲಾಗುವುದು.
ಜಯಮೃತ್ಯುಂಜಯ ಶ್ರೀಗಳ ಪದಚ್ಯುತಿಗೆ ಆಕ್ರೋಶ
ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಶ್ರೀಗಳ ಪದಚ್ಯುತಿಯನ್ನು ಡಾ. ಪ್ರಣವಾನಂದ ಶ್ರೀಗಳು ಖಂಡಿಸಿದರು. “ಭಿನ್ನಾಭಿಪ್ರಾಯಗಳನ್ನು ಒಳಗೊಳಗೆ ಪರಿಹರಿಸಬೇಕಾಗಿದ್ದರೆ ರಾಜಕೀಯ ಒತ್ತಡದಿಂದ ಸ್ವಾಮೀಜಿಯನ್ನು ಬಲಿಪಶು ಮಾಡಿರುವುದು ಅಕ್ಷಮ್ಯ. ಈ ಬಗ್ಗೆ ರಾಜ್ಯದ ಸಾಧುಸಂತರ ಸಮಾವೇಶದಲ್ಲಿ ಚರ್ಚಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಕ್ತಿಪೀಠದ ಟ್ರಸ್ಟಿಗಳಾದ ವೆಂಕಟೇಶ ಕಡೇಚೂರ್, ವೆಂಕಟೇಶ ಗುಂಡಾನೂರು, ಮುಖಂಡರಾದ ಮಲ್ಲಿಕಾರ್ಜುನ ಕುಂದಿ, ಮಹೇಶ್ ಹೋಳಕುಂದ, ಅಶೋಕ್ ಭೀಮಳ್ಳಿ, ರಮೇಶ್ ಗುತ್ತೇದಾರ್ ಹಾಗೂ ಮಾಧ್ಯಮ ಸಂಚಾಲಕ ಡಾ. ಸದಾನಂದ ಪೆರ್ಲ ಉಪಸ್ಥಿತರಿದ್ದರು.