ಕಲಬುರಗಿಜಿಲ್ಲಾಸುದ್ದಿ

ಕಾಳಗಿಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಟಂಟಂ ಪಲ್ಟಿ: ಏಳು ವಿದ್ಯಾರ್ಥಿಗಳು ಸೇರಿ ಎಂಟು ಮಂದಿಗೆ ಗಾಯ

ಕಾಳಗಿ: ಸರಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಟಂಟಂ ವಾಹನ ಪಲ್ಟಿಯಾದ ಪರಿಣಾಮ, ಏಳು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ಎಂಟು ಮಂದಿಗೆ ಗಾಯಗೊಂಡಿರುವ ಘಟನೆ ಕಾಳಗಿ ತಾಲೂಕಿನ ರೇವಗ್ಗಿ ಗುಡ್ಡದ ಕಮಾನ್ ಬಳಿ ಗುರುವಾರ ನಡೆದಿದೆ.

ಈ ಅಪಘಾತದಲ್ಲಿ ಹಲಚೇರಾ ಗ್ರಾಮದ ವೃದ್ಧೆ ಬಸಮ್ಮ ವಿಶ್ವನಾಥ ಸೇರಿ (65) ಹಾಗೂ ಬುಗಡಿ ತಾಂಡಾದ 9ನೇ ತರಗತಿ ವಿದ್ಯಾರ್ಥಿನಿ ಪ್ರಿಯಾಂಕಾ ರವಿ (15) ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಗೋಗಿ ಗ್ರಾಮದ 1ನೇ ತರಗತಿ ಬಾಲಕಿ ಸಮೃದ್ಧಿ ವಿನೋದ (7), ಬುಗಡಿ ತಾಂಡಾದ ಪಿಯುಸಿ ವಿದ್ಯಾರ್ಥಿನಿಯರಾದ ಸುಮಿತ್ರಾ ತಾರಾಸಿಂಗ್ ಚವಾಣ್ (18), ಗೀತಾ ರವಿ ರಾಠೋಡ (18), 10ನೇ ತರಗತಿ ವಿದ್ಯಾರ್ಥಿನಿ ನಿಶಾ ರಮೇಶ ರಾಠೋಡ (16) ಹಾಗೂ 9ನೇ ತರಗತಿಯ ನಿಖಿತಾ ಮೋಹನ ರಾಠೋಡ (15), ನಿಶಾ ರಾಮು ರಾಠೋಡ (15) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಗಾಯಾಳುಗಳನ್ನು ಮೊದಲಿಗೆ ಅರಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಗಂಭೀರವಾಗಿ ಗಾಯಗೊಂಡ ಮೂವರು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಮಾಹಿತಿ ಪ್ರಕಾರ, ಬುಗಡಿ ತಾಂಡದಿಂದ ರೇವಗ್ಗಿ ಗುಡ್ಡದ ಶಾಲೆ–ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಬಿಡಲು ಬರುತ್ತಿದ್ದ ಟಂಟಂ ವಾಹನದ ಮುಂದೆ ಬೆಕ್ಕು ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಚಾಲಕ ಯತ್ನಿಸಿದ ಪರಿಣಾಮ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದ ಕಮಾನ್ ಎದುರು ವಾಹನ ಪಲ್ಟಿಯಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಕಾಳಗಿ ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮಯ್ಯ ಬಿ.ಕೆ., ಎಎಸ್‌ಐ ಜಗನ್ನಾಥ, ಸಿಬ್ಬಂದಿ ಶ್ರೀಕಾಂತಯ್ಯಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಘಟನೆ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button