ಆಕಸ್ಮಿಕ ಅಗ್ನಿ ಅವಘಡ: 3 ಎಕರೆ ಕಬ್ಬು ಕರಕಲು – ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ!

ಅಫಜಲಪುರ: ತಾಲೂಕಿನ ದೇಸಾಯಿ ಕಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಸುಮಾರು 3 ಎಕರೆ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಕರಕಲಾದ ದುರ್ಘಟನೆ ನಡೆದಿದೆ.ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಹಿಂಚಗೇರಾ ಗ್ರಾಮದ ಸರ್ವೆ ನಂ.55ರಲ್ಲಿ ಬಸವರಾಜ ನೀಲಕಂಠ ನೂಲಾ ಅವರಿಗೆ ಸೇರಿದ ಕಬ್ಬಿನ ಹೊಲದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿ ಸಂಪೂರ್ಣ ಬೆಳೆ ಆವರಿಸಿತು. ಗಾಳಿ ವೇಗದಿಂದ ಬೆಂಕಿ ಮತ್ತಷ್ಟು ತೀವ್ರಗೊಂಡ ಪರಿಣಾಮ ರೈತರು ಏನು ಮಾಡಬೇಕೆಂದು ತಿಳಿಯದೆ ಕಂಗಾಲಾದರು.
ಇದಲ್ಲದೆ, ಕಲ್ಲೂರ ತಾಂಡದ ಸರ್ವೆ ನಂ.56ರಲ್ಲಿ ಜಗನುಕೃಷ್ಣ ಚವ್ಹಾಣ ಅವರಿಗೆ ಸೇರಿದ ಕಬ್ಬಿನ ಬೀಜ ಸಂಗ್ರಹ ಸ್ಥಳಕ್ಕೂ ಪಕ್ಕದ ಜಮೀನಿನ ಕಬ್ಬಿನ ಬೆಳೆಗೆ ಬಿದ್ದ ಬೆಂಕಿ ತಾಗಿ ಕಬ್ಬಿನ ಬೀಜ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಈ ಘಟನೆ ಮತ್ತೊಬ್ಬ ರೈತನಿಗೂ ಭಾರೀ ನಷ್ಟ ಉಂಟುಮಾಡಿದೆ.ರೈತ ಜಗನುಕೃಷ್ಣ ಚವ್ಹಾಣ ಮಾತನಾಡಿ, “ಸುಮಾರು ಮೂವತ್ತು ಸಾವಿರ ರೂಪಾಯಿ ವೆಚ್ಚ ಮಾಡಿ ಕಬ್ಬಿನ ಬೀಜ ಕಾಯ್ದಿಟ್ಟಿದ್ದೆ. ಆದರೆ ಬೆಂಕಿ ತಾಗಿ ಸಂಪೂರ್ಣ ಹಾನಿಯಾಗಿದೆ. ಇದೀಗ ನನಗೆ ದಿಕ್ಕು ತೋಚದಂತಾಗಿದೆ,” ಎಂದು ಭಾವಕರಾದರು.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆದರೆ ಅವರು ಆಗಮಿಸುವಷ್ಟರಲ್ಲಿ ಬಹುತೇಕ ಕಬ್ಬಿನ ಬೆಳೆ ಹಾಗೂ ಬೀಜ ಸುಟ್ಟು ಕರಕಲಾಗಿತ್ತು ಎಂದು ರೈತರು ದುಃಖ ವ್ಯಕ್ತಪಡಿಸಿದರು.
ಈ ಕುರಿತು ಯುವ ಮುಖಂಡ ಪ್ರೀತಮ್ ಚವ್ಹಾಣ ಮಾತನಾಡಿ, “ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಮಗುವಿನಂತೆ ಬೆಳೆಯನ್ನು ಜೋಪಾನ ಮಾಡುತ್ತಾರೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆ ಕ್ಷಣಾರ್ಧದಲ್ಲಿ ಭಸ್ಮವಾಗಿರುವುದು ದುಃಖಕರ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಸರ್ಕಾರ ತಕ್ಷಣ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ಹಾನಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿದರು.
ಘಟನೆಯ ಸಂದರ್ಭದಲ್ಲಿ ಸಂಜೀವ ನೂಲಾ, ರಾಜು ನೂಲಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



