ಎಸ್ಟಿ ಸೇರ್ಪಡೆ ಹೋರಾಟಕ್ಕೆ ಅಖಿಲ ಭಾರತೀಯ ಕೋಲಿ ಸಮಾಜದ ಸಂಪೂರ್ಣ ಬೆಂಬಲ – ಶಿವಲಿಂಗಪ್ಪ ಕಿನ್ನೂರ್

ಕಲಬುರಗಿ: ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಹಾಗೂ ಬಾರ್ಕಿ ಎಂಬ ಪರ್ಯಾಯ ಪದಗಳನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಸೋಮವಾರ ನಡೆಯಲಿರುವ ಕೋಲಿ–ಕಬ್ಬಲಿಗರ ಬೃಹತ್ ಸ್ವಾಭಿಮಾನಿ ಹೋರಾಟಕ್ಕೆ ಅಖಿಲ ಭಾರತೀಯ ಕೋಲಿ ಸಮಾಜವು ಸಂಪೂರ್ಣ ಬೆಂಬಲ ಸೂಚಿಸಿದೆ ಎಂದು ಸಮಾಜದ ರಾಷ್ಟ್ರೀಯ ಸಂಯೋಜಕ ಶಿವಲಿಂಗಪ್ಪ ಕಿನ್ನೂರ್ ತಿಳಿಸಿದರು.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸುಮಾರು 30 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಈ ಸಮುದಾಯಕ್ಕೆ ಸಂವಿಧಾನಾತ್ಮಕ ಮೀಸಲಾತಿ ಇನ್ನೂ ದೊರೆತಿಲ್ಲ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಕೋಲಿ ಸಮುದಾಯಕ್ಕೆ ಇನ್ನೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ, ಯಾರ ಪರವೂ ಅಲ್ಲ – ಹಕ್ಕಿಗಾಗಿ ಮಾತ್ರ” ಎಂದು ಸ್ಪಷ್ಟಪಡಿಸಿದರು.
ಪಕ್ಷಬೇಧ ಮರೆತು ಎಲ್ಲ ಸಂಘ–ಸಂಸ್ಥೆಗಳ ನಾಯಕರು ಈ ನ್ಯಾಯಯುತ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು.
ಬೆಂಗಳೂರಿನಲ್ಲಿ ನಡೆದ ಕೋಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹಾಗೂ ಬೃಹತ್ ಸಮಾವೇಶದ ನಿರ್ಣಯದಂತೆ, ಕೋಲಿ ಸಮಾಜವನ್ನು ಎಸ್ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟಕ್ಕೆ ನ್ಯಾಯ ದೊರೆಯುವ ಭರವಸೆ ಇದೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಡಿವಾಳಪ್ಪ ನರಿಬೋಳಿ, ದೊಡ್ಡ ಪಂಢಾರಿ, ಡಾ. ಟಿ.ಡಿ. ರಾಜ್, ಅನಿತಾ ಕೊರಬಾ, ಶ್ರೀಮಂತ ಮಾವನೂರ್, ದೇವೇಂದ್ರ ಚಿಗರಳ್ಳಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.



