ಸಪಾಯಿ ಕರ್ಮಚಾರಿಗಳ ಉಪಹಾರದಲ್ಲಿ ಅವ್ಯವಹಾರ ಆರೋಪ: ಟೆಂಡರ್ ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ನಗರದ ಸಪಾಯಿ ಕರ್ಮಚಾರಿಗಳಿಗೆ ಬೆಳಿಗ್ಗೆ ನೀಡಲಾಗುತ್ತಿರುವ ಉಪಹಾರದ ಗುತ್ತಿಗೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ, ಸಂಬಂಧಿತ ಟೆಂಡರ್ ರದ್ದುಪಡಿಸಿ ಸೂಕ್ತ ಗುತ್ತಿಗೆದಾರರಿಗೆ ವಹಿಸಿಕೊಡಬೇಕೆಂದು ಜೈ ಕನ್ನಡಿಗರ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಡಾ. ದತ್ತು ಹೆಚ್. ಭಾಸಗಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ, ಉಪಹಾರ ಪೂರೈಕೆ ಗುತ್ತಿಗೆದಾರರು ನಿಗದಿತ ಮೆನು ಪ್ರಕಾರ ಆಹಾರ ನೀಡುತ್ತಿಲ್ಲ. ಮೊಟ್ಟೆ, ಚಹಾ ನೀಡದಿರುವುದು, ಉತ್ತಮ ಗುಣಮಟ್ಟದ ಸಾಂಬಾರ್ ಬಳಸದೆ ಇರುವುದು ಹಾಗೂ ಅನ್ನವನ್ನೂ ಸರಿಯಾಗಿ ನೀಡದಿರುವುದು ಹಲವು ವರ್ಷಗಳಿಂದ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಗುತ್ತಿಗೆದಾರರು ಹಾಗೂ ಕಚೇರಿ ಸಿಬ್ಬಂದಿಗಳು ಹಣದ ಗೋಲಮಾಲ ನಡೆಸುತ್ತಿರುವುದರಿಂದ ಸಪಾಯಿ ಕರ್ಮಚಾರಿಗಳು ದಿನನಿತ್ಯದ ಶ್ರಮದಿಂದ ದೈಹಿಕವಾಗಿ ಕುಗ್ಗುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಫೆಬ್ರವರಿ 12ರಂದು ಮಹಾನಗರ ಪಾಲಿಕೆ ಕಚೇರಿ ಎದುರು, ಗೋವಾ ಹೋಟೆಲ್ ಎದುರುಗಡೆ ಒಬ್ಬ ಮಹಿಳಾ ಸಪಾಯಿ ಕರ್ಮಚಾರಿ ಉಪಹಾರ ಸಿಗದೆ ಮೂರ್ಛೆ ಹೋಗಿ ಬಿದ್ದ ಘಟನೆ ನಡೆದಿದ್ದು, ಅದರ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿದಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಉಪಹಾರದ ಟೆಂಡರ್ ಪಡೆದಿರುವ ಗೌಸ್ ಮತ್ತು ಈರಣ್ಣ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಈ ಎರಡು ಟೆಂಡರ್‌ಗಳನ್ನು ರದ್ದುಪಡಿಸಿ ಅವರ ಗುತ್ತಿಗೆ ಪ್ರಮಾಣಪತ್ರವನ್ನು ಕಪ್ಪುಪಟ್ಟಿಗೆ ಸೇರಿಸಿ, ಉತ್ತಮ ಗುಣಮಟ್ಟದ ಉಪಹಾರ ನೀಡಬಲ್ಲ ಹೊಸ ಗುತ್ತಿಗೆದಾರರಿಗೆ ಟೆಂಡರ್ ವಹಿಸಿಕೊಡಬೇಕೆಂದು ಒತ್ತಾಯಿಸಲಾಗಿದೆ. ಏಳು ದಿನಗಳೊಳಗಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಹಂತ ಹಂತವಾಗಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ದಿಲೀಪ ಕುಮಾರ ಯಲಪಳ್ಳಿ, ಉಷಾನ, ಸಂಜು ಮಾಳಿಗಿ, ವಿಜಯಕುಮಾರ ಮಾಳಗೆ, ಶರಣು ಕಮಕನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.



