ಅಂಬಿಗರ ಚೌಡಯ್ಯ ಭಾವಚಿತ್ರ ಅವಮಾನ:ರಸ್ತೆ ತಡೆ;ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಅಂಬಿಗರ ಚೌಡಯ್ಯ ಭಾವಚಿತ್ರ ಅವಮಾನ ಕೋಲಿ ಕಬ್ಬಲಿಗ ಸಮಾಜ ಆಕ್ರೋಶ

ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ತಹಶೀಲ್ದಾರರು ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಜೇವರ್ಗಿ:ಕೋಲಿ-ಕಬ್ಬಲಿಗ ಸಮಾಜದ ಆರಾಧ್ಯ ದೇವರಾದ ನಿಜಶರಣ ಅಂಬಿಗೇರ ಚೌಡಯ್ಯ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಶ್ಲೀಲವಾಗಿ ತಿದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಘಟನೆಗೆ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೊಚ್ಚಿಗೆದ್ದ ಸಮುದಾಯದ ಯುವಕರು ಟಯರಿಗೆ ಬೆಂಕಿ ಹಚ್ಚಿ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅಂಬಿಗರ ಚೌಡಯ್ಯ ಕಲ್ಯಾಣ ಮಂಟಪದಿಂದ ಬಸವೇಶ್ವರ ವೃತ್ತದವರೆಗೆ ಯುವಕರು ಮೆರವಣಿಗೆ ನಡೆಸಿ ರಸ್ತೆ ತಡೆ ಪ್ರತಿಭಟನೆ ಮಾಡಿದರು. ಸಮಾಜದವರ ಆರೋಪದ ಪ್ರಕಾರ, ಅನಾಮಧೇಯ ಯುವತಿಯ ಅಶ್ಲೀಲ ಭಾವಚಿತ್ರ ಮತ್ತು ವೀಡಿಯೊಗಳಿಗೆ ಚೌಡಯ್ಯನವರ ಭಾವಚಿತ್ರವನ್ನು ಜೋಡಿಸಿ “ಚುಂಬಿಸುವ” ರೀತಿಯ ವೀಡಿಯೊ ಸೃಷ್ಟಿಸಿ ಇನ್ಸ್ಟಾಗ್ರಾಂನಲ್ಲಿ ಹಂಚಲಾಗಿದೆ. ಇದೇ ಯುವತಿಯ ಇನ್ನೊಂದು ಅಶ್ಲೀಲ ಚಿತ್ರಕ್ಕೂ ಚೌಡಯ್ಯನವರ ಭಾವಚಿತ್ರವನ್ನು ಸೇರಿಸಿ ಅವಮಾನಕಾರಿ ರೀತಿಯಲ್ಲಿ ಹರಿಬಿಡಲಾಗಿದೆ.
ಈ ಘಟನೆ ಸಮಾಜದ ಭಾವನೆಗಳಿಗೆ ಧಕ್ಕೆ ತರುವಂತದ್ದು. ಉದ್ದೇಶಪೂರ್ವಕವಾಗಿ ಅಸೂಯೆ, ಅಶಾಂತಿ ಹಾಗೂ ಗಲಭೆ ಉಂಟುಮಾಡಲು ಸಮಾಜಘಾತುಕ ಶಕ್ತಿಗಳು ಯತ್ನಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ತಹಶೀಲ್ದಾರರು ಮತ್ತು ತಾಲ್ಲೂಕು ದಂಡಾಧಿಕಾರಿಗಳಿಗೆ ಕೋಲಿ-ಕಬ್ಬಲಿಗ ಸಮಾಜದವರು ಮನವಿ ಸಲ್ಲಿಸಿದ್ದು, “ಸಮಾಜದ್ರೋಹಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳದಿದ್ದರೆ ಜೇವರ್ಗಿ ನಗರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತಾಲೂಕು ತಳವಾರ ಸಮಾಜದ ಅಧ್ಯಕ್ಷ ಗಿರೀಶ್ ತುಂಬಗಿ, ಮರೇಪ್ಪ ಕೋಳಕೂರ, ಭೀಮರಾಯ ಜನಿವಾರ, ನಿಂಗಪ್ಪ ಆರ್. ದೇವಣಗಾವ, ಮಲ್ಲೇಶಪ್ಪ ಗೌಡ ರೆವನೂರ, ದೇವೇಂದ್ರ ಚಿಗರಳ್ಳಿ, ಸಂತೋಷ ಜೈನಾಪುರ, ಗುರು ಜೈನಾಪುರ, ನಾಗರಾಜ ವಿ.ಟಿ., ರಾಜು ತಳವಾರ, ರಾಚಣ್ಣ ತಳವಾರ, ಕಾಂತಪ್ಪ ಚೆನ್ನುರ್, ಶ್ರೀಮಂತ ಮಾವನೂರ, ವೀರೇಶ ದೊಡ್ಮನಿ, ಸಾಯಿಬಣ್ಣ ತಳವಾರ, ಶ್ರೀಮಂತ ಕರ್ಕೆಹಳ್ಳಿ, ಭೀಮು ತಳವಾರ, ಭೀಮು ಆಂದೋಲ ಹಾಗೂ ಅನೇಕ ಹೋರಾಟಗಾರರು ಉಪಸ್ಥಿತರಿದ್ದರು.