ಕಲಬುರಗಿಜಿಲ್ಲಾಸುದ್ದಿ

ಶಾಲೆ ಮತ್ತು ಮನೆ ಎರಡೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಪೀಠಗಳಾಗಿವೆ: ಅಭಿನವ ಶ್ರೀ

ಅಫಜಲಪುರ: ಪಟ್ಟಣದ ಶ್ರೀ ಬಸವ ಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ 2025–26ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವು ಸಡಗರ–ಸಂಭ್ರಮದಿಂದ ಜರುಗಿತು. ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ, ಪಾಲಕರ ಹರ್ಷೋದ್ಗಾರ ಕಾರ್ಯಕ್ರಮ ಕಂಗೊಳಿಸಿತು.

ಆಳಂದ ತಾಲೂಕಿನ ಮಾದನ ಹಿಪ್ಪರಗದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸಮಾರಂಭಕ್ಕೆ ಧಾರ್ಮಿಕ ಸ್ಪರ್ಶ ನೀಡಿದರು.

ಮಹಾಸ್ವಾಮಿಗಳು ಮಾತನಾಡಿ, “ಮಕ್ಕಳಿಗೆ ಕೇವಲ ಅಕ್ಷರ ಜ್ಞಾನ ನೀಡುವುದು ಸಾಕಾಗುವುದಿಲ್ಲ. ಶಿಕ್ಷಣದ ಜೊತೆಗೆ ಮೌಲ್ಯಯುತ ಸಂಸ್ಕಾರಗಳನ್ನು ಬೋಧಿಸಿದಾಗ ಮಾತ್ರ ಅವರು ಉತ್ತಮ ನಾಗರಿಕರಾಗಿ ಸಮಾಜದಲ್ಲಿ ಹೊಳೆಯುತ್ತಾರೆ. ಶಾಲೆ ಮತ್ತು ಮನೆ ಎರಡೂ ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಪೀಠಗಳಾಗಿವೆ” ಎಂದು ಹೇಳಿದರು.

ಇಂದಿನ ಯುಗದಲ್ಲಿ ತಂತ್ರಜ್ಞಾನ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಕ್ಕಳ ನಡವಳಿಕೆ ಮತ್ತು ಚಟುವಟಿಕೆಗಳ ಮೇಲೆ ಪಾಲಕರು ಕಣ್ಣಿಟ್ಟಿರಬೇಕು ಎಂದು ಸಲಹೆ ನೀಡಿದರು.

“ದಿನದಲ್ಲಿ ಕನಿಷ್ಠ ಒಂದು ಬಾರಿ ಮಕ್ಕಳ ಜೊತೆ ಕುಳಿತು ಅವರ ದಿನಚರಿಯನ್ನು ವಿಚಾರಿಸಿ. ಅವರು ಏನು ಕಲಿಯುತ್ತಿದ್ದಾರೆ, ಯಾರ ಜೊತೆ ಸ್ನೇಹ ಬೆಳೆಸಿದ್ದಾರೆ, ಯಾವ ವಿಷಯದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ”ಪಾಲಕರಿಗೆ ಕಿವಿಮಾತು ಹೇಳಿದರು.

ಕೋಲಿ ಸಮಾಜದ ತಾಲೂಕ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಶಂಕರ್ ಮ್ಯಾಕೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕರ್ ಜ್ಯೋತಿ ಬೆಳಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು.ಉದ್ಯಮಿ ರಾಜೇಂದ್ರ ಕಂಬಾರ ಫೋಟೋ ಪೂಜೆ ನೆರವೇರಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಚ್. ದಂಡೋತಿ ಕಾರ್ಯಕ್ರಮದ ವ್ಯವಸ್ಥೆಯನ್ನು ಸಮರ್ಥವಾಗಿ ನಿಭಾಯಿಸಿದರು.

ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಬಿ.ಎನ್. ಅಧ್ಯಕ್ಷತೆ ವಹಿಸಿದರು. ಕರವೇ ಅಧ್ಯಕ್ಷ ಶ್ರೀಕಾಂತ ದಿವಾಣಜಿ ಸ್ವಾಗತಿಸಿದರು.ಪ್ರಾಸ್ತಾವಿಕವಾಗಿ ಬಸವರಾಜ ನಿಂಬರ್ಗಿ ಮಾತನಾಡಿ ಶಿಕ್ಷಣ ಮಹತ್ವವನ್ನು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮೈಬೂಬ್ ಪಟೇಲ್, ರಾಜಕುಮಾರ್ ಗುಣಾರಿ, ಚಿದಾನಂದ ಸೋನಾರ, ರಾಜಕುಮಾರ್ ಉಕ್ಕಲಿ, ಸಂತೋಷ್ ಚಲವಾದಿ, ಆನಂದ್ ಬಿರಾದಾರ್, ಯಲ್ಲಪ್ಪ ಉಡುಗಿ, ಶ್ರೀಮತಿ ಸುವರ್ಣ ಮೈಂದರ್ಗಿ, ಅಮೃತ್ ನಂದೂರ್, ಡಾ. ಪ್ರಭಾಕರ್ , ಮಲ್ಲಿಕಾರ್ಜುನ್ ಭಜಂತ್ರಿ, ಸುಭಾಷ್ ದೇಗನಾಳ, ಶ್ರೀಶೈಲ್ ಪ್ಯಾಟಿ, ಗುರು ಹಿರೇಮಠ, ಬಸವರಾಜ್ ಓನಮಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಶ್ರೀಮತಿ ಗೌರಮ್ಮ ಘತ್ತರಗಿ, ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಸಿದ್ದು ಶಿವಣಗಿ ಹಾಗೂ ಮಾಜಿ ಸೈನಿಕರಾದ ಈರಣ್ಣ ಬಿರಾದಾರ್, ಶಂಕರ್ಲಿಂಗ್ ಕರನಾಳ್ಕರ, ಅಂಬಣ್ಣ ಜಮಾದಾರ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸತ್ಕರಿಸುವ ಮೂಲಕ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿತು.

ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನೃತ್ಯ, ನಾಟಕ, ದೇಶಭಕ್ತಿ ಗೀತೆಗಳು ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆ ಎಲ್ಲರ ಮನಸೆಳೆಯಿತು. ಪಾಲಕರು ಹಾಗೂ ಅತಿಥಿಗಳು ಮಕ್ಕಳ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭವು ಸಂಭ್ರಮದ ವಾತಾವರಣದಲ್ಲಿ ಸಮಾಪ್ತಿಯಾಯಿತು.

Related Articles

Leave a Reply

Your email address will not be published. Required fields are marked *

Back to top button