ಹಾಸ್ಯನಟಿ ನಯನಾ ಹೇಳಿಕೆ ಖಂಡನೀಯ – ರಾಜಶೇಖರ್ ಶಿಲ್ಪಿ

ಜೇವರ್ಗಿ: ಕಾರ್ಯಕ್ರಮವೊಂದರಲ್ಲಿ ಜಾತಿ ಪದಗಳನ್ನು ಬಳಸುವುದರ ಜೊತೆಗೆ ಸಮುದಾಯವನ್ನು ಸಂಬೋಧಿಸುವ ರೀತಿಯಲ್ಲಿ ಅಸಭ್ಯವಾಗಿ ಮಾತನಾಡಿದ ಹಾಸ್ಯನಟಿ ನಯನಾ ಅವರ ಹೇಳಿಕೆ ಖಂಡನೀಯವಾಗಿದೆ ಎಂದು ಜೇವರ್ಗಿ ವಕೀಲರ ಸಂಘದ ಕಾರ್ಯದರ್ಶಿ ರಾಜಶೇಖರ್ ಶಿಲ್ಪಿ ಆಕ್ರೋಶ ವ್ಯಕ್ತಪಡಿಸಿದರು.
“ಜಾತಿ ಮತ್ತು ಸಮುದಾಯದ ವಿಷಯದಲ್ಲಿ ಯಾವುದೇ ವಿವೇಕವಿಲ್ಲದೆ, ಪುನಃಪುನಃ ಅರಿವಿಲ್ಲದಂತೆ ಮಾತನಾಡಿರುವುದು ಅತಿ ಗಂಭೀರ. ‘ನನಗೆ ತಿಳಿದೇ ಇಲ್ಲ’ ಎಂದು ಹೇಳಿ ಜಾರಿಕೊಳ್ಳುವುದು ಸರಿಯಲ್ಲ,” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದರು.
ಹಲವು ಸಂಘಟನಾ ಮುಖಂಡರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಕ್ಷಮೆ ಕೇಳುವುದ ಬದಲು ನಯನಾ ಉಪದೇಶ ಮಾಡಿದ ಘಟನೆ ಕೂಡ ಅವರ ಅವಿವೇಕಿತನಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.
“ವಿದ್ಯಾವಂತರು, ಸಮಾಜದಲ್ಲಿ ಖ್ಯಾತಿ ಹೊಂದಿರುವ ಸೆಲೆಬ್ರಿಟಿಗಳು ಈ ರೀತಿಯಾಗಿ ಮಾತನಾಡಿದರೆ ಸಮಾಜದ ಮೇಲೆ ಏನು ಪರಿಣಾಮ? ಅವರಿಗೆ ಇರುವ ಜವಾಬ್ದಾರಿಯನ್ನು ಮರೆತ ವರ್ತನೆ ಇದು,” ಎಂದು ಅವರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಜೇವರ್ಗಿ ವಕೀಲರ ಸಂಘದ ಉಪಾಧ್ಯಕ್ಷ ಭಾಷಾ ಪಟೇಲ್ ಯಾಳವಾರ, ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಪೂಜಾರಿ, ಖಜಾಂಚಿ ಅಶೋಕ್ ಜಿರ್, ರಾಮನಾಥ್ ಭಂಡಾರಿ, ರಾಜು ಮುದ್ದಡಗಿ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.



