ಮದ್ಯವರ್ತಿಗಳ ಹಾವಳಿಗೆ ಕಡಿವಾಣ: ಉಪ ತಹಸೀಲ್ದಾರ ರಾಜಶೇಖರ ಬಂಡೆ ಜನಸ್ನೇಹಿ ಆಡಳಿತ

ಅಫಜಲಪುರ: ತಹಸೀಲ ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿ ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿ ಕಿರುಕುಳ ನೀಡುತ್ತಿದ್ದ ಪರಿಸ್ಥಿತಿಗೆ ನೂತನ ಉಪ ತಹಸೀಲ್ದಾರ ರಾಜಶೇಖರ ಬಂಡೆ ಅವರು ಕಟ್ಟುನಿಟ್ಟಿನ ಕಡಿವಾಣ ಹಾಕಿದ್ದಾರೆ.
ಇತ್ತೀಚೆಗೆ ಕಳೆದ ಎರಡು ತಿಂಗಳ ಹಿಂದೆ ಉಪ ತಹಸೀಲ್ದಾರರಾಗಿ ಅಧಿಕಾರ ಸ್ವೀಕರಿಸಿದ ರಾಜಶೇಖರ ಬಂಡೆ ಅವರು, ಕಚೇರಿಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತಂದು, ನೇರವಾಗಿ ಸಾರ್ವಜನಿಕರ ಅರ್ಜಿಗಳನ್ನು ಪರಿಶೀಲಿಸಿ ನಿಗದಿತ ಅವಧಿಯಲ್ಲೇ ಸೇವೆ ಒದಗಿಸುವ ವ್ಯವಸ್ಥೆ ರೂಪಿಸಿದ್ದಾರೆ.
ಸಮಾಜೀಕ ಭದ್ರತೆ ಯೋಜನೆಗಳು, ವಂಶಾವಳಿ, ವಾಸಸ್ಥಳ, ಎಸ್‌ಸಿ/ಎಸ್‌ಟಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳು, ಬೆಳೆ ದೃಢೀಕರಣ ಪ್ರಮಾಣ ಪತ್ರ ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಿದ ಫಲಾನುಭವಿಗಳಿಗೆ ಯಾವುದೇ ಕಾಲಹರಣವಿಲ್ಲದೆ ಸಮಯಕ್ಕೆ ಸರಿಯಾಗಿ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ.
ಇದರಿಂದ ದಲ್ಲಾಳಿಗಳ ಅವಲಂಬನೆ ಕಡಿಮೆಯಾಗಿದ್ದು, ನೇರವಾಗಿ ಸರ್ಕಾರಿ ಸೇವೆ ದೊರೆಯುತ್ತಿರುವುದರಿಂದ ಸಾರ್ವಜನಿಕರು ಉಪ ತಹಸೀಲ್ದಾರ ರಾಜಶೇಖರ ಬಂಡೆ ಅವರ ಜನಸ್ನೇಹಿ ಆಡಳಿತಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



