ಕಲಬುರಗಿಜಿಲ್ಲಾಸುದ್ದಿ

ವಿಮಾನ–ರೈಲು ಸೌಲಭ್ಯಗಳ ಸುಧಾರಣೆಗಾಗಿ ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಮನವಿ

ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಎಚ್ಚರಿಕೆ

ಕಲಬುರಗಿ: ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿರುವ ಕಲಬುರಗಿ ವಿಮಾನ ಹಾರಾಟ ಪುನರ್‌ಪ್ರಾರಂಭಿಸುವುದು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಾರಿಗೆ ಅಗತ್ಯಗಳನ್ನು ಪೂರೈಸುವಂತೆ ಒತ್ತಾಯಿಸಿ, ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚೀನ್ ಎಸ್. ಪರತಾಬಾದ ನೇತೃತ್ವದ ತಂಡವು ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಿದೆ.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟಗಳನ್ನು ತಕ್ಷಣ ಪುನರ್‌ಪ್ರಾರಂಭಿಸುವುದು,ಕಲ್ಯಾಣ ಕರ್ನಾಟಕ ರೈಲ್ವೆ ವಿಭಾಗೀಯ ಮುಖ್ಯ ಕಚೇರಿ ಕೆಲಸವನ್ನು ತಕ್ಷಣ ಆರಂಭಿಸುವುದು,ಸೋಲಾಪುರ–ಯಶವಂತಪುರ ರೈಲಿಗೆ “ಗೌತಮ ಬುದ್ಧ ಎಕ್ಸ್‌ಪ್ರೆಸ್” ಎಂದು ನಾಮಕರಣ,ಸೋಲಾಪುರ–ಮುಂಬೈ ನಡುವೆ ಸಂಚಾರಿಸುವ ಒಂದೇ ಭಾರತ ರೈಲನ್ನು ಕಲಬುರಗಿ–ಮುಂಬೈ ಮಾರ್ಗಕ್ಕೆ ತಿರುಗಿಸುವುದು,ಕಲಬುರಗಿ–ವೀರದ ಕಾಟಿ ನಡುವೆ ರೈಲು ಸೇವೆ ಬಲಪಡಿಸುವ ಕ್ರಮ ಸದರಿ ಬೇಡಿಕೆಗಳನ್ನು ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸಿ ತಕ್ಷಣ ಪರಿಹಾರ ಒದಗಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಮಾನ ಹಾರಾಟ ನಿಲುಗಡೆಯಿಂದ ಜನರಿಗೆ ತೊಂದರೆ
ಕಲಬುರಗಿ ವಿಮಾನ ಹಾರಾಟ ಸ್ಥಗಿತಗೊಂಡಿರುವುದರಿಂದ ಕಲ್ಯಾಣ ಕರ್ನಾಟಕ ಭಾಗದ ಪ್ರಯಾಣಿಕರು ಹೈದರಾಬಾದ್ ಅಥವಾ ಬೀದರಕ್ಕೆ ತೆರಳಿ ವಿಮಾನ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರ ಸಮಯ ಹಾಗೂ ಹಣದ ನಷ್ಟವಾಗುತ್ತಿದೆ. ಹಲವಾರು ಜಿಲ್ಲೆಗಳು ಒಳಗೊಂಡ ಈ ವಿಮಾನ ನಿಲ್ದಾಣದಲ್ಲಿ ಸೇವೆ ನಿಂತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ರೈಲ್ವೆ ವಿಭಾಗೀಯ ಕಚೇರಿ – ದೀರ್ಘಕಾಲದ ಕನಸು
ವರ್ಷಗಳಿಂದ ಸ್ಥಗಿತಗೊಂಡಿರುವ ವಿಭಾಗೀಯ ಕಚೇರಿ ಕಾರ್ಯ ಪ್ರಾರಂಭಿಸಿದರೆ ಕಲ್ಯಾಣ ಕರ್ನಾಟಕದ ಅನೇಕ ಯುವಕರಿಗೆ ಉದ್ಯೋಗಾವಕಾಶ ಸಿಗುತ್ತದೆ. ರೈಲು ಸಂಚಾರ ಹಾಗೂ ಮೂಲಸೌಕರ್ಯಗಳ ಸುಧಾರಣೆಗೆ ಇದು ಅತ್ಯಂತ ಅಗತ್ಯವೆಂದು ಸಂಘಟನೆಯವರು ಅಭಿಪ್ರಾಯ ಪಟ್ಟಿದ್ದಾರೆ.

ಬೇಡಿಕೆ ಈಡೇರದಿದ್ದರೆ ಹೋರಾಟ
ಚಳಿಗಾಲದ ಅಧಿವೇಶನದಲ್ಲೇ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಕಲಬುರಗಿ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಗುಡ್ಡು ಸಿಂಗ್, ಅಣವೀರ ಪಾಟೀಲ, ಶಿವಕುಮಾರ ಯಾದವ, ಪಿಂಟು ಜಮಾದಾರ, ಹುಲಿಕಂಠ, ಮಲ್ಲು, ದರ್ಶನ, ಶ್ರೀಮಂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button