ಬ್ರಹ್ಮಪೂರದಲ್ಲಿ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವ ವಿಜೃಂಭಣೆ ಯಿಂದ ಆಚರಣೆಗೆ ನಿರ್ಧಾರ

ಕಲಬುರಗಿ:ಬ್ರಹ್ಮಪೂರದ ನ್ಯೂ ಮಾತಾ ಮಾಣಿಕೇಶ್ವರಿ ಕಾಲೋನಿಯ ಸರ್ಕಾರಿ ಆಸ್ಪತ್ರೆ ಸಮೀಪ ಇರುವ ನಿಜ ಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಸ್ಥಾಪಿತ ಸ್ಥಳದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅಂಬಿಗರ ಚೌಡಯ್ಯನವರ 906ನೇ ಜಯಂತೋತ್ಸವವನ್ನು ಅತೀವ ವಿಜೃಂಭಣೆಯಿಂದ ಆಚರಿಸಲು ಅಂಬಿಗರ ಚೌಡಯ್ಯ ಗೆಳೆಯರ ಬಳಗ ನಿರ್ಧರಿಸಿದೆ.
ಈ ಕುರಿತು ದಿ. 07-01-2026 ರಂದು ನಡೆದ ಸಭೆಯಲ್ಲಿ ಜಯಂತೋತ್ಸವವನ್ನು ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಅದರಂತೆ ದಿನಾಂಕ 21-01-2026 ರಂದು ಬೆಳಗ್ಗೆ 8.00 ಗಂಟೆಗೆ ನಿಜ ಶರಣ ಅಂಬಿಗರ ಚೌಡಯ್ಯನವರ ಮಹಾ ಅಭಿಷೇಕ, ನಂತರ ತೊಟ್ಟಿಲು ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 11.00 ಗಂಟೆಗೆ ಬಹಿರಂಗ ಸಭೆ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಅನೇಕ ರಾಜಕೀಯ ಮುಖಂಡರು, ಮಠಾಧೀಶರು, ವಿವಿಧ ಸಮಾಜಗಳ ಮುಖಂಡರು, ಯುವ ಮುಖಂಡರು, ಮಹಿಳೆಯರು ಹಾಗೂ ಮುತ್ತೈದಿಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3.00 ಗಂಟೆಗೆ ನಿಜ ಶರಣ ಅಂಬಿಗರ ಚೌಡಯ್ಯನವರ 9 ಅಡಿ ಭವ್ಯ ಮೂರ್ತಿಯೊಂದಿಗೆ ಸಕಲ ಸಾಂಸ್ಕೃತಿಕ ವಾದ್ಯಮೇಳ, ಧ್ವನಿವರ್ಧಕದೊಂದಿಗೆ ಭವ್ಯ ಮೆರವಣಿಗೆ ಆರಂಭವಾಗಲಿದೆ. ಗಂಗಾನಗರ ಹನುಮಾನ ಮಂದಿರದ ಮುಂದೆ ಲಾಲಗೇರಿ ಕ್ರಾಸ್, ಅಲ್ಲಿಂದ ಹೇರಿಟೇಜ್ ಇನ್ ಹೋಟೆಲ್, ಜನತಾ ಬಜಾರ್, ಸೂಪರ್ ಮಾರ್ಕೆಟ್ ಮೂಲಕ ಬ್ರಹ್ಮಪೂರ ಪೊಲೀಸ್ ಠಾಣೆಯ ಎದುರುಗಡೆಯಿಂದ ಜಗತ್ ವೃತ್ತದವರೆಗೆ ಮೆರವಣಿಗೆ ಸಮಾರೋಪಗೊಳ್ಳಲಿದೆ.
ಈ ಧಾರ್ಮಿಕ ಕಾರ್ಯಕ್ರಮ ಹಾಗೂ ಶರಣರ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಅಂಬಿಗರ ಚೌಡಯ್ಯ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ಜಮಾದಾರ ಹಾಗೂ ಕಾರ್ಯಾಧ್ಯಕ್ಷ ರಾಕೇಶ್ ಜಮಾದಾರ ಅವರು ಜಂಟಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.



