ಕಲ್ಯಾಣ ಕರ್ನಾಟಕದವರಿ ಗೆ ಹೊರ ಜಿಲ್ಲೆಗಳಲ್ಲಿ 8% ಮೀಸಲಾತಿ ಜಾರಿಗೆ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ರಾಜ್ಯದ ಇತರೆ 24 ಜಿಲ್ಲೆಗಳಲ್ಲಿ ಹೆಚ್ಚುವರಿ 8% ಮೀಸಲಾತಿ ಕಲ್ಪಿಸಬೇಕೆಂಬ ಬೇಡಿಕೆ ಮತ್ತೆ ಜೋರಾಗಿದೆ. ಈ ಕುರಿತು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜ (ರಿ.) ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ್ ಬಿ.ಹೆಚ್. ಹೆಳವರ ಆಗ್ರಹಿಸಿದ್ದಾರೆ.
ಈ ಕುರಿತು ಮನವಿ ಸಲ್ಲಿಸಿರುವ ಅವರು, ಸಂವಿಧಾನದ ಕಲಂ 371(J) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಶಿಕ್ಷಣ, ಉದ್ಯೋಗ ಹಾಗೂ ಮುಂಬಡತಿಯಲ್ಲಿ ವಿಶೇಷ ಮೀಸಲಾತಿ ನೀಡಲಾಗಿದೆ. ಅದರಂತೆ ಡಿ ಗ್ರೂಪ್ ಹುದ್ದೆಗಳಲ್ಲಿ 85%, ಸಿ ಗ್ರೂಪ್ನಲ್ಲಿ 80% ಮತ್ತು ಎ, ಬಿ ಗ್ರೂಪ್ ಹುದ್ದೆಗಳಲ್ಲಿ 75% ಮೀಸಲಾತಿ ಈ ಭಾಗದವರಿಗೆ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದ 24 ಜಿಲ್ಲೆಗಳಲ್ಲಿ ಈ ಭಾಗದ ಅಭ್ಯರ್ಥಿಗಳಿಗೆ ಹೆಚ್ಚುವರಿ 8% ಮೀಸಲಾತಿ ನೀಡಬೇಕಾದ ನಿಯಮ ಜಾರಿಗೆ ಬರದೆ ಇರುವುದರಿಂದ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದ್ದಾರೆ. ಹೊರ ಜಿಲ್ಲೆಗಳ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶೈಕ್ಷಣಿಕ ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಿದ್ದರೂ, ಈ ಭಾಗದವರಿಗೆ ಆ ಜಿಲ್ಲೆಗಳಲ್ಲಿ ಸಮಾನ ಅವಕಾಶಗಳು ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ, ಕೆಲವು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು 371(J) ನಿಯಮಾವಳಿಯನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ವಿಫಲವಾಗುತ್ತಿವೆ. ಇದರಿಂದ ಕಲ್ಯಾಣ ಕರ್ನಾಟಕದ ಯುವಕರಿಗೆ ಅನಾನುಕೂಲ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದ್ದರಿಂದ, ರಾಜ್ಯ ಸರ್ಕಾರ ತಕ್ಷಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಲ್ಯಾಣ ಕರ್ನಾಟಕ ಪ್ರದೇಶದವರಿಗೆ ಹೊರ ಜಿಲ್ಲೆಗಳಲ್ಲಿ 8% ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಅಲ್ಲದೆ, ಎಲ್ಲಾ ಸಂಸ್ಥೆಗಳು 371(J) ನಿಯಮಾವಳಿಯನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ್ ಬಿ.ಹೆಚ್. ಹೆಳವರ ಮನವಿಯಲ್ಲಿ ಆಗ್ರಹಿಸಿದ್ದಾರೆ.


