ಕೆಂಭಾವಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಕ್ಕೆ ಕರವೇ ಆಗ್ರಹ

ಕೆಂಭಾವಿ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ-ಮುಗ್ಗಟ್ಟುಗಳು, ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳ ಮೇಲೆ ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಕಾರ್ಯಕರ್ತರು, “ಕೆಂಭಾವಿ ಪಟ್ಟಣದ ಅನೇಕ ಅಂಗಡಿಗಳು ಹಾಗೂ ಸರ್ಕಾರಿ-ಖಾಸಗಿ ಶಾಲೆಗಳ ಮೇಲೆ ಆಂಗ್ಲ ನಾಮಫಲಕಗಳು ರಾರಾಜಿಸುತ್ತಿವೆ. ಇದು ಕನ್ನಡ ನಾಡಿನ ಭಾಷಾಭಿಮಾನಕ್ಕೆ ಧಕ್ಕೆಯಾಗಿದೆ. ಕನ್ನಡ ನೆಲದಲ್ಲಿ ವಾಸಿಸಿ, ನೆಲ-ಜಲ-ಗಾಳಿ ಸೇವಿಸುತ್ತಾ ಅನ್ಯಭಾಷೆಯ ವ್ಯಾಮೋಹದಲ್ಲಿ ಮುಳುಗುವುದು ಕನ್ನಡ ತಾಯಿಗೆ ದ್ರೋಹ ಮಾಡಿದಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿ ಲ್ಲವೆಂದು ಆರೋಪಿಸಿದರು. ತಕ್ಷಣವೇ ಆಂಗ್ಲ ನಾಮಫಲಕ ಗಳನ್ನು ತೆರವುಗೊಳಿಸಿ, ಕನಿಷ್ಠ ಶೇಕಡಾ 60ರಷ್ಟು ಕನ್ನಡ ಭಾಷೆಯಲ್ಲಿ ನಾಮಫಲಕಗಳನ್ನು ಒಂದು ವಾರದೊಳಗೆ ಅಳವಡಿಸಲು ಆದೇಶಿಸಬೇಕು. ಇಲ್ಲವಾದರೆ ಪುರಸಭೆ ವಿರುದ್ಧ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸುರಪುರ ತಾಲೂಕು ಘಟಕದ ಖಜಾಂಚಿ ಶ್ರೀಶೈಲ ಕಾಚಾಪುರ್, ವಲಯ ಅಧ್ಯಕ್ಷ ಕುಮಾರ್ ಮೊಪಗಾರ, ಕಾರ್ಯದರ್ಶಿ ಶಿವು ಮಲ್ಲಿಬಾವಿ, ಚಾಲಕರ ಸಂಘದ ಗೌರವ ಅಧ್ಯಕ್ಷ ಮಹಿಬೂಬ್ ದಫೆದಾರ್, ಅಂಬಯ್ಯ ಬಡಿಗೇರ, ತಿಪ್ಪೇಶ್ ತಳವಾರ, ನಿಂಗಪ್ಪ ಸುಂಕದ ಸೇರಿದಂತೆ ಇತರರು ಉಪಸ್ಥಿತರಿದ್ದರು.



