ಕಲಬುರಗಿಜಿಲ್ಲಾಸುದ್ದಿ

ಅಂಗನವಾಡಿ ನೌಕರರ ಗ್ರಾಚ್ಯುಟಿ ಅನುದಾನ ಬಿಡುಗಡೆಗೆ ಒತ್ತಾಯ

2011 ರಿಂದ 2023 ಮಾರ್ಚ್ ತನಕ ನಿವೃತ್ತರಾದ ಕಾರ್ಯಕರ್ತೆಯರಿಗೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ಗ್ರಾಚ್ಯುಟಿ ನೀಡುವಂತೆ ಆಗ್ರಹ”

ಕಲಬುರಗಿ:ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಜಿಲ್ಲಾ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಸಿ, ಸಿಡಿಪಿಓ ಮುಖಾಂತರ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸಂಘದ ಬೇಡಿಕೆ ಪ್ರಕಾರ, 2011 ರಿಂದ 2023 ಮಾರ್ಚ್ ವರೆಗೆ ನಿವೃತ್ತರಾದ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸುಪ್ರೀಂ ಕೋರ್ಟ್ ತೀರ್ಪಿನಂತೆ 1972ರ ಗ್ರಾಚ್ಯುಟಿ ಕಾಯಿದೆ ಅಡಿ ಹಣ ಪಾವತಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.


1975ರ ಅಕ್ಟೋಬರ್ 2ರಂದು ಆರಂಭವಾದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಇಂದು ರಾಜ್ಯದ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ತಲುಪುವ ಮಟ್ಟಕ್ಕೆ ಬೆಳೆಯುವಂತೆ ಮಾಡಿದವರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು.

ಸುಪ್ರೀಂ ಕೋರ್ಟ್ 2022ರ ಏಪ್ರಿಲ್ 25ರಂದು ನೀಡಿದ ತೀರ್ಪು (Civil Appeal No.3153/2022 – SLP (Civil) No.30193/2017) ಪ್ರಕಾರ, ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲ ಕಾರ್ಯಕರ್ತೆಯರು ಮತ್ತು ಸಹಾಯಕಿಯರು 1972ರ ಗ್ರಾಚ್ಯುಟಿ ಕಾಯಿದೆಯ ಅಡಿ ಒಳಪಡುತ್ತಾರೆ ಎಂದು ಸ್ಪಷ್ಟಪಡಿಸಿದೆ.

ಈ ತೀರ್ಪಿನ ಆಧಾರದ ಮೇಲೆ 2023ರ ಏಪ್ರಿಲ್‌ನಿಂದ ರಾಜ್ಯ ಸರ್ಕಾರ ಗ್ರಾಚ್ಯುಟಿ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಅದು 2011ರಿಂದ 2023 ಮಾರ್ಚ್ ತನಕ ನಿವೃತ್ತರಾದ 10,311 ಕಾರ್ಯಕರ್ತೆಯರು ಮತ್ತು 11,980 ಸಹಾಯಕಿಯರುಗೆ ಅನ್ವಯಿಸಿಲ್ಲ.

ಸತತ ಒತ್ತಾಯದ ಫಲವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ₹183 ಕೋಟಿ ಅನುದಾನ ಬಿಡುಗಡೆಗೆ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ, ಆದರೆ ಅನುದಾನ ಇನ್ನೂ ಬಿಡುಗಡೆ ಆಗಿಲ್ಲವೆಂದು ಸಂಘದ ನಾಯಕರು ಆರೋಪಿಸಿದರು.

ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಹಿಂದಿನ ನಿವೃತ್ತ ನೌಕರರಿಗೂ ಗ್ರಾಚ್ಯುಟಿ ಮೊತ್ತ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷೆ ಗೌರಮ್ಮಾ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುಳಾ ಬಿ, ಖಜಾಂಚಿ ಗೋರಬಿ, ಶರಣಮ್ಮಾ ಖನ್ನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button