ಸಾಲಮನ್ನಾ, ಹಸಿಬರ ಘೋಷಣೆಗೆ ಒತ್ತಾಯಿಸಿ ಧರಣಿ – ರೈತರ ನೋವಿಗೆ ಈಡಿಗ ಸಮುದಾಯದ ಸಂಪೂರ್ಣ ಬೆಂಬಲ: ಡಾ. ಪ್ರಣವಾನಂದ ಶ್ರೀ

ಕಲಬುರಗಿ: ರೈತರ ನೋವು ದೇಶದ ನೋವಾಗಿದ್ದು, ಅನ್ನದಾತರ ಸಂಕಷ್ಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ನೆರವಿಗೆ ಧಾವಿಸಬೇಕು ಎಂದು ಚಿತ್ತಾಪುರ ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಶ್ರೀಗಳು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಕಲಬುರಗಿ ಜಗತ್ ವೃತ್ತದಲ್ಲಿ ಅಕ್ಟೋಬರ್ 2ರಿಂದ ಆರಂಭವಾಗಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಅಕ್ಟೋಬರ್ 13ರ ಕಲಬುರಗಿ ಬಂದ್‌ಗೆ ಈಡಿಗ ಸಮುದಾಯವು ಸಂಪೂರ್ಣ ಬೆಂಬಲ ನೀಡಲಿದೆ. ಆ ದಿನ ಸಮುದಾಯದ ಅಂಗಡಿ-ಮುಗ್ಗಟ್ಟುಗಳು ಬಂದ್ ಆಗಲಿದ್ದು, ಆಟೋ ಚಾಲಕರು ಕೂಡ ಬಂದ್‌ಗೆ ಕೈಜೋಡಿಸಲಿದ್ದಾರೆ.
“ರೈತ ಕಷ್ಟಕ್ಕೆ ಸಿಲುಕಿದರೆ ಅದು ರಾಷ್ಟ್ರ ಸಂಕಷ್ಟಕ್ಕೆ ಸಿಲುಕಿದಂತೆ. ದೇವರಿಗೆ ನೈವೇದ್ಯ ನೀಡುವವರೇ ಜನರಿಗೆ ಅನ್ನ ನೀಡುವ ರೈತರು. ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ನ್ಯಾಯವಾದ ಬೇಡಿಕೆಗಳಿಗೆ ಎಲ್ಲರೂ ಬೆಂಬಲ ನೀಡಬೇಕು” ಎಂದು ಡಾ. ಪ್ರಣವಾನಂದ ಶ್ರೀಗಳು ಹೇಳಿದರು.
ಹೋರಾಟ ಸಮಿತಿಯ ಅಧ್ಯಕ್ಷ ದಯಾನಂದ ಪಾಟೀಲ್ ಮಾತನಾಡಿ, “ಅತಿವೃಷ್ಟಿಯಿಂದ ರೈತರು ಹಬ್ಬವನ್ನೇ ಆಚರಿಸದ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಕಲಬುರಗಿ ಜಿಲ್ಲೆಯನ್ನು ಹಸಿಬರಗಾಲ ಜಿಲ್ಲೆ ಎಂದು ಘೋಷಿಸಬೇಕು. ಸಾಲಮನ್ನಾ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ, ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಈಡಿಗ ಸಮುದಾಯದ ನಾಯಕ ವೆಂಕಟೇಶ ಗುಂಡಾನೂರು, ಅಂಬಯ್ಯ ಗುತ್ತೇದಾರ್ (ಇಬ್ರಾಹಿಂಪುರ್), ಡಾ. ಸದಾನಂದ ಪೆರ್ಲ, ರಮೇಶ್ ಗುತ್ತೇದಾರ್, ರೈತ ಮುಖಂಡರಾದ ಅನಿಲ್ ಡಾಂಗೆ, ಯಲ್ಲಾಲಿಂಗ ಪೂಜಾರಿ, ಮಹೇಶ್ ಕಡೇಚೂರ್, ಮಲ್ಲಿಕಾರ್ಜುನ ಪೂಜಾರಿ, ಭೀಮಾಶಂಕರ ಮಾಡಿಯಾಳ, ಶರಣಬಸಪ್ಪ ಗಣಜಲಖೇಡ್, ನಾಗಪ್ಪ ರಾಯಚೂರಕರ, ಸಾಜಿದ್ ಅಹಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.