ಜೇವರ್ಗಿ–ಯಡ್ರಾಮಿ ರೈತ ಸಂಪರ್ಕ ಕೇಂದ್ರಗಳಲ್ಲಿ ಭ್ರಷ್ಟಾಚಾರ ಆರೋಪ: ಕೃಷಿ ಅಧಿಕಾರಿಗಳ ಅಮಾನತಿಗೆ ರೈತ ಸಂಘ ಆಗ್ರಹ

ಕಲಬುರಗಿ:ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕೌಂಟೆಂಟ್ಗಳು ಮತ್ತು ಕೃಷಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣ ಅಮಾನತು ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಸಮಿತಿ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಎಸ್. ಗಂವಾರ ಅವರು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಅವರು ವಿವರಿಸಿದಂತೆ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಪಟ್ಟಣ, ದೇವೇಂದ್ರ ಹಿರೇಗೌಡ, ವಿಜಯಲಕ್ಷ್ಮೀ ಹಾಗೂ ಆಶಾ ಎಂಬ ನಾಲ್ವರು ಅಧಿಕಾರಿಗಳಿಗೆ ಒಂದು ವರ್ಷ ಹಿಂದೆಯೇ ಸರ್ಕಾರ ವರ್ಗಾವಣೆ ಆದೇಶ ನೀಡಿದ್ದರೂ, ಅದನ್ನು ಉಲ್ಲಂಘಿಸಿ ಅದೇ ಕಚೇರಿಯಲ್ಲಿ ಮುಂದುವರಿದು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದಲ್ಲದೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ನೀಡಬೇಕಾದ ಅನುದಾನವನ್ನು ಅರ್ಹ ರೈತರಿಗೆ ನೀಡದೆ, ಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ಕಡಲೆ ಬೀಜ ಹಾಗೂ ಶೇಂಗಾ ಬೀಜಗಳನ್ನು ಎಸ್ಸಿ–ಎಸ್ಟಿ ರೈತರಿಗೆ ರಿಯಾಯಿತಿ ದರದಲ್ಲಿ ನೀಡಬೇಕಾಗಿದ್ದರೂ, ಅದನ್ನು ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಒಬ್ಬ ರೈತ ಒಂದು ಪ್ಯಾಕೆಟ್ ಬೀಜ ಮಾತ್ರ ಪಡೆದಿದ್ದರೂ, ದಾಖಲೆಗಳಲ್ಲಿ ನಾಲ್ಕು ಪ್ಯಾಕೆಟ್ ಪಡೆದಂತೆ ತೋರಿಸಿ ಉಳಿದ ಬೀಜವನ್ನು ಸಾಮಾನ್ಯರಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಪ್ರತಿ ಪ್ಯಾಕೆಟ್ಗೆ 250 ರಿಂದ 1,000 ರೂ.ವರೆಗೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ.
ತಾಲೂಕಿನ ಐದು ರೈತ ಸಂಪರ್ಕ ಕೇಂದ್ರಗಳಲ್ಲಿ ಜವಾಬ್ದಾರಿಯುತ ಅಧಿಕಾರಿಗಳು ಇಲ್ಲದೆ, ಗುಣಮಟ್ಟವಿಲ್ಲದ ಕೀಟನಾಶಕಗಳನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ. ಯಾವ ಕೀಟನಾಶಕವನ್ನು ಯಾವ ಬೆಳೆಗೆ ಬಳಸಬೇಕು ಎಂಬ ಮೂಲಭೂತ ಮಾಹಿತಿಯೂ ಸಿಬ್ಬಂದಿಗೆ ಇಲ್ಲದೆ, ಮಾರುಕಟ್ಟೆಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಮೇಲ್ಕಂಡ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಅಥವಾ ಅಮಾನತು ಮಾಡಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಡಾ. ಮಲ್ಲಿಕಾರ್ಜುನ ಎಸ್. ಗಂವಾರ ಅವರು ಎಚ್ಚರಿಸಿದ್ದಾರೆ.



