ಸರ್ಕಾರಿ–ಅನುದಾನಿತ ಪಿಯು ಕಾಲೇಜುಗಳ ಫಲಿತಾಂಶ ವೃದ್ಧಿಗೆ ಒತ್ತು ಅಗತ್ಯ: ಸುರೇಶ ಕೆ. ಅಕ್ಕಣ್ಣ

ಅತ್ಯುತ್ತಮ ವಿದ್ಯಾರ್ಥಿಗಳಿಗೆ ಸತ್ಕಾರ
ಪ್ರಸಕ್ತ ಶೈಕ್ಷಣಿಕ ಸಾಲಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಪ್ರತೀಕ ಮತ್ತು ಸೌಮ್ಯ, ನಿರಂತರ ಹಾಜರಾತಿಯಲ್ಲಿ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ಆದಿತ್ಯಾ ಪಾಟೀಲ್, ರಕ್ಷಿತಾ ರಾಠೋಡ ಹಾಗೂ
ಗ್ರಾಮೀಣ ಭಾಗದಲ್ಲಿ ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮ ವ್ಯಾಸಂಗ ಮಾಡಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಗತಿ ಸಾಧಿಸುತ್ತಿರುವ ಈ ಕಾಲೇಜಿನ ವಿದ್ಯಾರ್ಥಿಗಳಾದ ಧೂಳಪ್ಪ ಪೂಜಾರಿ ಮತ್ತು ಅಂಬಿಕಾ ಅಂಬಾರಾಯ ಅವರನ್ನು ಉತ್ತಮ ಜಾಣ ವಿದ್ಯಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಬುರಗಿ: ಸರ್ಕಾರಿ ಹಾಗೂ ಅನುದಾನಿತ ಪಿಯು ಕಾಲೇಜುಗಳ ದ್ವಿತೀಯ ಪಿಯು ಫಲಿತಾಂಶವನ್ನು ಹೆಚ್ಚಿಸಿ, ರಾಜ್ಯದ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯನ್ನು ಕೊನೆಯ ಸ್ಥಾನದಿಂದ ಗೌರವಯುತ ಸ್ಥಾನಕ್ಕೆ ತರುವುದಕ್ಕಾಗಿ ಗಂಭೀರ ಪ್ರಯತ್ನ ಅಗತ್ಯವಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸುರೇಶ ಕೆ. ಅಕ್ಕಣ್ಣ ಹೇಳಿದರು.
ನಗರದ ಡಾ. ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಎಸ್.ವಿ.ಪಿ.ಇ. ಟ್ರಸ್ಟ್‌ನ ರಾಮಾಬಾಯಿ ಜಹಾಗೀರದಾರ (ಆರ್.ಜೆ) ಸ್ವತಂತ್ರ ಪಿಯು ವಿಜ್ಞಾನ ಕಾಲೇಜು ಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನುದಾನ ರಹಿತ ಕಾಲೇಜುಗಳ ಫಲಿತಾಂಶ ನೂರರ ಆಸುಪಾಸಿನಲ್ಲಿ ಇರುವಂತೆಯೇ, ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿಯೂ ಫಲಿತಾಂಶ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಆಡಳಿತಾಧಿಕಾರಿಗಳನ್ನು ಇಲಾಖೆ ವತಿಯಿಂದಲೇ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಸುಂದರ ಸಮಾಜ ನಿರ್ಮಾಣಕ್ಕೆ ಪರಧರ್ಮ, ಪರಭಾಷೆಗಳ ಮೇಲೆ ಪರಸ್ಪರ ಪ್ರೀತಿ ಹಾಗೂ ಗೌರವ ಅಗತ್ಯ. ವಿದ್ಯಾರ್ಥಿ ದೆಸೆಯಿಂದಲೇ ಸದ್ಗುಣಗಳನ್ನು ಮೈಗೂಡಿಸಿಕೊಂಡಾಗ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಅವರು ಹೇಳಿದರು. ಉತ್ತಮ ಸಂಸ್ಕಾರ, ಶಿಸ್ತು, ಸಮಯಪಾಲನೆ ಹಾಗೂ ವಿದ್ಯಾರ್ಥಿಗಳಲ್ಲಿನ ವಿಶಿಷ್ಟ ಗುಣಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಸ್.ವಿ.ಪಿ.ಇ. ಟ್ರಸ್ಟ್ ಅಧ್ಯಕ್ಷರಾದ ಡಾ. ಕೆ. ವಿಜಯಮೋಹನ ಮಾತನಾಡಿ, ಶ್ರದ್ಧೆ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಯಶಸ್ಸು ಖಂಡಿತವೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜೀವನದಲ್ಲಿ ಸದಾ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಟ್ರಸ್ಟ್ ಕಾರ್ಯದರ್ಶಿಗಳಾದ ಕೆ. ಎನ್. ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಏಕತಾ ಮನೋಭಾವ ಬೆಳೆಸಿಕೊಳ್ಳಬೇಕು. ಸರಳ ಹಾಗೂ ನಿರಂತರ ಅಧ್ಯಯನದಿಂದ ಹೆಚ್ಚು ಅಂಕ ಗಳಿಸಬಹುದು. ಆತಂಕ, ಒತ್ತಡ ಮತ್ತು ಭಯವನ್ನು ದೂರ ಮಾಡಿಕೊಳ್ಳುವಂತೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಭುರ್ಲಿ ಪ್ರಹ್ಲಾದ್ ಮಾತನಾಡಿ, ಪಿಯು ಶಿಕ್ಷಣ ಹಂತವು ಜೀವನ ರೂಪಿಸುವ ಮಹತ್ವದ ಘಟ್ಟ. ನಿಶ್ಚಿತ ಗುರಿಯೊಂದಿಗೆ ಉತ್ತಮ ಅಂಕ ಗಳಿಸಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ‘ಮೊಬೈಲ್ ಬಿಡಿ, ಪುಸ್ತಕ ಇಡಿ’ ಘೋಷವಾಕ್ಯದೊಂದಿಗೆ ವಾರ್ಷಿಕ ಪರೀಕ್ಷೆ, ಸಿಇಟಿ, ನೀಟ್, ಜೆಇಇ ಮೊದಲಾದ ಪರೀಕ್ಷೆಗಳ ಪೂರ್ವಸಿದ್ಧತಾ ರೂಪರೇಷೆ ರೂಪಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಾದ ದೀನನಾಥ ಹಾಗೂ ಮನೋಜ್ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಮಳೇಂದ್ರ ಹಿರೇಮಠ ಸ್ವಾಗತಿಸಿದರು, ದಿವ್ಯಾ ಪಟವಾರಿ ಅತಿಥಿ ಪರಿಚಯಿಸಿದರು, ಕೇದಾರ ದೀಕ್ಷಿತ ನಿರೂಪಿಸಿದರು, ಭುವನೇಶ್ವರಿ ವಂದಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ಮನರಂಜಿಸಿದವು.



