ಕಲಬುರಗಿಜಿಲ್ಲಾಸುದ್ದಿ

ತೊಗರಿಗೆ ₹11,500 ಬೆಂಬಲ ಬೆಲೆ ಹೆಚ್ಚಿಸಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರ ಮನವಿ

ಕಲಬುರಗಿ: ಸೇಡಂ ತಾಲೂಕಿನಲ್ಲಿ ರೈತರ ಹೆಸರು ಖರೀದಿಯಲ್ಲಿ ನಡೆದ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ₹11,500ಕ್ಕೆ ಹೆಚ್ಚಿಸುವಂತೆ ಕೇಂದ್ರ ಕೃಷಿ ಸಚಿವರ ಮೇಲೆ ಒತ್ತಡ ಹೇರಬೇಕೆಂದು ಒತ್ತಾಯಿಸಿ, ಕೇಂದ್ರ ಉಕ್ಕು ಹಾಗೂ ಭಾರಿ ಕೈಗಾರಿಕಾ ಸಚಿವರು ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸೇಡಂ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಂತಕುಮಾರ ಚನ್ನಕ್ಕಿ, ಕಲ್ಯಾಣ ಕರ್ನಾಟಕದ ವಿಶೇಷವಾಗಿ ಕಲಬುರಗಿ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಜಾಗತಿಕ ಮಟ್ಟದಲ್ಲಿ ಜಿ.ಐ ಟ್ಯಾಗ್ ಹೊಂದಿರುವ ದ್ವಿದಳ ಧಾನ್ಯಗಳಲ್ಲಿ ಅಗ್ರಸ್ಥಾನದಲ್ಲಿದ್ದರೂ, ಈ ವರ್ಷ ಅತಿಯಾದ ಮಳೆಯಿಂದ ಬೆಳೆ ಸಂಪೂರ್ಣ ಹಾಳಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ನಿಗದಿ ಮಾಡಿದ ತೊಗರಿ ಬೆಳೆಯ ಎಂಎಸ್‌ಪಿ ದರ ಅತ್ಯಂತ ಕಡಿಮೆಯಿದ್ದು, ಎಂಟು ತಿಂಗಳ ಬೆಳೆಯಾದ ತೊಗರಿಗೆ ರೈತರು ಬಿತ್ತನೆಯಿಂದ ಹಿಡಿದು ಕೊಯ್ಲು ತನಕ ಭಾರಿ ವೆಚ್ಚ ಭರಿಸಬೇಕಾಗಿದೆ. 2025–26ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಫಸಲು ನಾಶವಾಗಿದ್ದು, ಸರ್ಕಾರ ನೀಡಿರುವ ಬೆಳೆ ಪರಿಹಾರವೂ ರೈತರ ನಷ್ಟಕ್ಕೆ ಸಾಕಾಗುತ್ತಿಲ್ಲ. ಪ್ರಸ್ತುತ ₹8,000 ಆಗಿರುವ ಬೆಂಬಲ ಬೆಲೆಯನ್ನು ₹11,500ಕ್ಕೆ ಹೆಚ್ಚಿಸಿದರೆ ಮಾತ್ರ ರೈತರಿಗೆ ಸ್ವಲ್ಪಮಟ್ಟಿಗೆ ಪರಿಹಾರವಾಗುತ್ತದೆ ಎಂದು ಅವರು ಮನವಿ ಮಾಡಿದರು.

ಇದೇ ವೇಳೆ ರೈತರು ಬೆಳೆ ವಿಮೆಗೆ ವಂತಿಗೆ ಪಾವತಿಸಿದ್ದರೂ ವಿಮಾ ಕಂಪನಿಗಳು ಇದುವರೆಗೆ ಪರಿಹಾರ ಹಣ ನೀಡಿಲ್ಲ. ಆದ್ದರಿಂದ ತಕ್ಷಣವೇ ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿ ಶೇಕಡಾ 99ರಷ್ಟು ಪರಿಹಾರ ಹಣ ರೈತರಿಗೆ ಜಮಾ ಮಾಡಿಸಬೇಕು ಎಂದು ಒತ್ತಾಯಿಸಿದರು. ತೊಗರಿ ಬೆಳೆಗೆ ಗೊಡ್ಡು ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ತೊಗರಿ ಸಂಶೋಧನಾ ಕೇಂದ್ರ ಮಂಜೂರು ಮಾಡಬೇಕೆಂದೂ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್, ಬಿಜೆಪಿ ಮುಖಂಡ ಜಿ.ಕೆ. ಪಾಟೀಲ್, ಶಶಿಕಾಂತ ಗುತ್ತೇದಾರ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button