“ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು: ಅಯ್ಯಪ್ಪ ರಾಮತೀರ್ಥ ಒತ್ತಾಯ”

ಚಿತ್ತಾಪುರ: ನಿರಂತರ ಮಳೆ ಹಾಗೂ ಪ್ರವಾಹದಿಂದಾಗಿ ರೈತರ ಬದುಕು ಅತಂತ್ರಗೊಂಡಿರುವ ಹಿನ್ನೆಲೆ, ಮಾನವೀಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣವೇ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕದ ಹಲವೆಡೆ ಮಳೆಯಿಂದಾಗಿ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಮನೆಗಳಿಗೆ ನೀರು ನುಗ್ಗಿ ದವಸಧಾನ್ಯ, ದಿನಬಳಕೆಯ ವಸ್ತುಗಳು ಹಾನಿಯಾಗಿದ್ದು, ಅನೇಕ ಬಡ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ಹಾಗೂ ಸಂತ್ರಸ್ತರಿಗೆ ನೆರವಾಗಬೇಕು ಎಂದು ಆಗ್ರಹಿಸಿದರು.
ಭೀಮಾ ನದಿಯ ಪ್ರವಾಹದಿಂದ ಸುಮಾರು 3 ಸಾವಿರ ಎಕರೆ ಜಮೀನು ಮುಳುಗಡೆಯಾಗಿದ್ದು, ಉದ್ದು, ಹೆಸರು, ತೊಗರಿ, ಭತ್ತ, ಹತ್ತಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ತುರ್ತಾಗಿ ಎಚ್ಚೆತ್ತು ಪರಿಹಾರ ಕಾರ್ಯ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಪ್ರವಾಹ ಪೀಡಿತ ಹೊನಗುಂಟಾ ಗ್ರಾಮಕ್ಕೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಮಂಗಳವಾರ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ ಎಂದು ರಾಮತೀರ್ಥ ತಿಳಿಸಿದರು. ಜನರ ಗೋಳು ಗಗನಕ್ಕೇ ತಲುಪಿದೆ. ಸರ್ಕಾರ ತಕ್ಷಣ ಪರಿಹಾರ ನೀಡುವುದರ ಜೊತೆಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.